ಧಾರವಾಡ: ಸರ್ಕಾರಿ ಹುದ್ದೆಗಾಗಿ ಹಗಲಿರುಳು ಶ್ರಮಿಸಿ ಓದುತ್ತಿದ್ದರೂ, ನೇಮಕಾತಿ ಪ್ರಕ್ರಿಯೆಗಳು ನಡೆಯದಿರುವುದನ್ನು ಕಂಡು ಮನನೊಂದ ಯುವತಿಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ಶಿವಗಿರಿಯಲ್ಲಿ ನಡೆದಿದೆ.
ಮೃತರನ್ನು ಬಳ್ಳಾರಿ ಮೂಲದ 25 ವರ್ಷದ ಪಲ್ಲವಿ ಕಗ್ಗಲ್ ಎಂದು ಗುರುತಿಸಲಾಗಿದೆ. ಇವರು ಕಳೆದ ನಾಲ್ಕು ವರ್ಷಗಳಿಂದ ಧಾರವಾಡದಲ್ಲಿ ನೆಲೆಸಿ, ಸರ್ಕಾರಿ ಉದ್ಯೋಗ ಪಡೆಯುವ ಛಲದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (Competitive Exams) ತರಬೇತಿ ಪಡೆಯುತ್ತಿದ್ದರು.
ಆದರೆ, ಕಳೆದ ಕೆಲವು ವರ್ಷಗಳಿಂದ ಸರಿಯಾಗಿ ನೇಮಕಾತಿಗಳು ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಪಲ್ಲವಿ ತೀವ್ರ ಹತಾಶೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದೇ ಖಿನ್ನತೆಯಲ್ಲಿ ಅವರು ಶಿವಗಿರಿಯ ರೈಲ್ವೆ ಹಳಿಯ ಮೇಲೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಧಾರವಾಡ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ (KIMS) ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಧಾರವಾಡ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






