ಬಾಗಲಕೋಟೆ : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬೆದರಿಕೆ ಹಾಕಿದ್ದ ಆರೋಪದ ಮೇಲೆ ಜನಪ್ರಿಯ ಜಾನಪದ ಗಾಯಕ ‘ಮ್ಯೂಸಿಕ್ ಮೈಲಾರಿ’ ಖ್ಯಾತಿಯ ಮೈಲಾರಪ್ಪನನ್ನು ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಡಗುಂಟಿ ಗ್ರಾಮದ ನಿವಾಸಿಯಾದ ಮೈಲಾರಪ್ಪ ಸಣ್ಣಕಲಕಪ್ಪ ಮಡಿವಾಳರ (29) ಬಂಧಿತ ಆರೋಪಿ. ಈತ ಸಂಗೀತ ಕ್ಷೇತ್ರದಲ್ಲಿ ‘ಮ್ಯೂಸಿಕ್ ಮೈಲಾರಿ’ (Music Mailari)ಎಂದೇ ಗುರುತಿಸಿಕೊಂಡಿದ್ದನು.
ಪ್ರಕರಣದ ಹಿನ್ನೆಲೆ:
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಈತ ಲೈಂಗಿಕ ದೌರ್ಜನ್ಯ (Minor Rape Case) ಎಸಗಿದ್ದ ಎನ್ನಲಾಗಿದೆ. ದೌರ್ಜನ್ಯದ ಬಳಿಕ ಬಾಲಕಿಗೆ ಯಾರಿಗೂ ವಿಷಯ ತಿಳಿಸದಂತೆ ಬೆದರಿಕೆಯನ್ನೂ ಹಾಕಿದ್ದನು. ಈ ಸಂಬಂಧ ಸಂತ್ರಸ್ತೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಪೋಕ್ಸೋ (POCSO)ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಬಾಗಲಕೋಟೆ ಎಸ್‌ಪಿ ಸಿದ್ಧಾರ್ಥ್ ಗೋಯಲ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಮಹಾಲಿಂಗಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.






