ನವದೆಹಲಿ: ಭಾರತೀಯ ಸೇನೆಯ ಬತ್ತಳಿಕೆಗೆ ಮತ್ತಷ್ಟು ಬಲ ಬಂದಂತಾಗಿದೆ. ಅಮೆರಿಕದ ಬೋಯಿಂಗ್ ಸಂಸ್ಥೆಯಿಂದ ಖರೀದಿಸಲಾಗಿದ್ದ ವಿಶ್ವದ ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್ ‘ಎಎಚ್-64ಇ ಅಪಾಚಿ’ (AH-64E Apache) ಯ ಅಂತಿಮ ಬ್ಯಾಚ್ ಭಾರತಕ್ಕೆ ಬಂದಿಳಿದಿದೆ. ಇದರೊಂದಿಗೆ ಒಪ್ಪಂದದಂತೆ ಒಟ್ಟು 6 ಹೆಲಿಕಾಪ್ಟರ್‌ಗಳ ಹಸ್ತಾಂತರ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ದೈತ್ಯ ಸರಕು ಸಾಗಣೆ ವಿಮಾನವಾದ ಆಂಟೊನೊವ್ ಎನ್-124 ಮೂಲಕ ಈ ಮೂರು ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ತರಲಾಗಿದೆ. ಇವುಗಳನ್ನು ರಾಜಸ್ಥಾನದ ಜೋಧ್‌ಪುರದಲ್ಲಿರುವ ಸೇನೆಯ 451 ಏವಿಯೇಷನ್ ಸ್ಕ್ವಾಡ್ರನ್‌ಗೆ (Army Aviation Squadron) ಸೇರ್ಪಡೆಗೊಳಿಸಲಾಗುತ್ತಿದೆ. ಶೀಘ್ರದಲ್ಲೇ ಜೋಡಣೆ ಮತ್ತು ತಾಂತ್ರಿಕ ತಪಾಸಣೆ ಮುಗಿಸಿ ಇವು ಅಧಿಕೃತವಾಗಿ ಕಾರ್ಯಾಚರಣೆಗೆ ಇಳಿಯಲಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ, “ಅಪಾಚಿ ಹೆಲಿಕಾಪ್ಟರ್‌ಗಳ ಆಗಮನವು ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಪಾಲುದಾರಿಕೆಯ ಪ್ರಮುಖ ಮೈಲಿಗಲ್ಲು. ಇದು ಉಭಯ ದೇಶಗಳ ನಾಯಕರು ನೀಡಿದ್ದ ಬದ್ಧತೆಯನ್ನು ಪೂರೈಸಿದೆ. ಈ ಹೆಲಿಕಾಪ್ಟರ್‌ಗಳು ಅತ್ಯಾಧುನಿಕ ಯುದ್ಧ ಸಾಮರ್ಥ್ಯವನ್ನು ಹೊಂದಿದ್ದು, ಪ್ರಾದೇಶಿಕ ಭದ್ರತೆಯನ್ನು ಬಲಪಡಿಸಲಿವೆ” ಎಂದು ತಿಳಿಸಿದೆ.
ಏನಿದರ ವಿಶೇಷ?
ಕಳೆದ ಜುಲೈನಲ್ಲಿ ಮೊದಲ ಹಂತದ 3 ಹೆಲಿಕಾಪ್ಟರ್‌ಗಳು ಭಾರತಕ್ಕೆ ಬಂದಿದ್ದವು. ಇವು ಈಗಾಗಲೇ ‘ಮರು ಜ್ವಾಲ’ (Maru Jwala) ಸಮರಾಭ್ಯಾಸದಲ್ಲಿ ಭಾಗವಹಿಸಿ ತಮ್ಮ ತಾಕತ್ತು ಪ್ರದರ್ಶಿಸಿವೆ. ಮರುಭೂಮಿ ಪ್ರದೇಶಗಳಲ್ಲಿ ಮತ್ತು ಕಠಿಣ ಸನ್ನಿವೇಶಗಳಲ್ಲಿ ಶತ್ರುಗಳ ಟ್ಯಾಂಕ್‌ಗಳನ್ನು ಮತ್ತು ನೆಲೆಗಳನ್ನು ಕ್ಷಣಮಾತ್ರದಲ್ಲಿ ಧ್ವಂಸ ಮಾಡುವ ಸಾಮರ್ಥ್ಯ ಇವುಗಳಿಗಿದೆ. ಜೋಧ್‌ಪುರದಲ್ಲಿ ಇವುಗಳ ನಿಯೋಜನೆಯಿಂದಾಗಿ ಪಾಕಿಸ್ತಾನ ಗಡಿ ಭಾಗದಲ್ಲಿ ಭಾರತದ ವಾಯು ದಾಳಿ ಸಾಮರ್ಥ್ಯ (Strike Capability) ದುಪ್ಪಟ್ಟಾಗಿದೆ.






