ಹೈದರಾಬಾದ್: ಕನ್ನಡದ ಬ್ಲಾಕ್‌ಬಸ್ಟರ್ ಚಿತ್ರ ‘ಕೆಜಿಎಫ್ ಚಾಪ್ಟರ್-2’ (KGF-2)ನ ಸಹ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಕೀರ್ತನ್ ನಾಡಗೌಡ (Keerthan Nadagouda) ಅವರ ಮನೆಯಲ್ಲಿ ತೀವ್ರ ಶೋಕ ಆವರಿಸಿದೆ. ಹೈದರಾಬಾದ್‌ನಲ್ಲಿ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ ಕೀರ್ತನ್ ಅವರ ನಾಲ್ಕೂವರೆ ವರ್ಷದ ಪುತ್ರ ಲಿಫ್ಟ್‌ನಲ್ಲಿ ಸಿಲುಕಿ ಸಾ*ವನ್ನಪ್ಪಿದ್ದಾನೆ.
ಕೀರ್ತನ್ ನಾಡಗೌಡ ಹಾಗೂ ಅವರ ಪತ್ನಿ ಸಮೃದ್ಧಿ ಪಟೇಲ್ (Samruddhi Patel) ಅವರು ಕಳೆದ ಮೂರು ದಿನಗಳ ಹಿಂದೆ ಕುಟುಂಬ ಸಮೇತ ಹೈದರಾಬಾದ್‌ಗೆ ತೆರಳಿದ್ದರು. ಈ ವೇಳೆ ಮಗ ಸೋರ್ನಾಷ್ (Sornash) ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದು, ದುರದೃಷ್ಟವಶಾತ್ ಪ್ರಾ*ಣ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಆಟವಾಡಿಕೊಂಡಿರಬೇಕಾದ ಮಗು ಕಣ್ಣೆದುರೇ ಸಾ*ವನ್ನಪ್ಪಿರುವುದು ಪೋಷಕರನ್ನು ಆಘಾತಕ್ಕೀಡುಮಾಡಿದೆ.
ಕೀರ್ತನ್ ನಾಡಗೌಡ ಅವರು ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ (Sandalwood) ಸಕ್ರಿಯರಾಗಿದ್ದಾರೆ. ತೆರೆಮರೆಯಲ್ಲಿ ಹಲವಾರು ಸಿನಿಮಾಗಳ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿರುವ ಅವರು, ಪ್ಯಾನ್ ಇಂಡಿಯಾ ಹಿಟ್ ಚಿತ್ರ ‘ಕೆಜಿಎಫ್-2’ನ ಸಹ ನಿರ್ದೇಶಕರಾಗಿ ವ್ಯಾಪಕ ಮನ್ನಣೆ ಗಳಿಸಿದ್ದರು. ಮಗುವಿನ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.






