ಧಾರವಾಡ: ಸರ್ಕಾರಿ ಕೆಲಸ ಗಿಟ್ಟಿಸಿ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಹೊತ್ತು ವಿದ್ಯಾಕಾಶಿಗೆ ಬಂದಿದ್ದ ಬಳ್ಳಾರಿ ಮೂಲದ ಯುವತಿಯೊಬ್ಬಳು ರೈಲು ಹಳಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಧಾರವಾಡದ ಶಿವಗಿರಿ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಕಗ್ಗಲ್ ಗ್ರಾಮದ ಪಲ್ಲವಿ ಕಗ್ಗಲ್ (25) (Pallavi Kaggal) ಮೃತಪಟ್ಟ ಯುವತಿ. ಬಿಕಾಂ ಪದವಿ ಮುಗಿಸಿದ್ದ ಈಕೆ, ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಧಾರವಾಡದಲ್ಲಿ ನೆಲೆಸಿ ಸತತ ಸಿದ್ಧತೆ ನಡೆಸುತ್ತಿದ್ದರು.
ಪಲ್ಲವಿ ಅವರು 2024ರಲ್ಲಿ ನಡೆದ ಪೊಲೀಸ್ ಪೇದೆ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ (Physical Test) ಅತ್ಯುತ್ತಮ ಪ್ರದರ್ಶನ ನೀಡಿ ಉತ್ತೀರ್ಣರಾಗಿದ್ದರು. ಆದರೆ, ನಂತರ ನಡೆದ ಲಿಖಿತ ಪರೀಕ್ಷೆಯಲ್ಲಿ (Written Exam) ಅಲ್ಪ ಅಂತರದಿಂದ ವಿಫಲರಾಗಿದ್ದರು. ಇದರಿಂದ ಎದೆಗುಂದದ ಅವರು, ಮತ್ತೆ ಪೊಲೀಸ್ ಇಲಾಖೆಯ ಮುಂದಿನ ನೇಮಕಾತಿ ಪರೀಕ್ಷೆಗಳಿಗೆ ಛಲದಿಂದ ಓದುತ್ತಿದ್ದರು ಎನ್ನಲಾಗಿದೆ.
ಶಿವಗಿರಿ ರೈಲ್ವೆ ಹಳಿಯ ಬಳಿ ಯುವತಿಯ ಶವ ಪತ್ತೆಯಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ರೈಲ್ವೆ ಪೊಲೀಸರು (Railway Police) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇದು ಆಕಸ್ಮಿಕ ಅಪಘಾತವೇ ಅಥವಾ ಪರೀಕ್ಷೆಯ ಒತ್ತಡದಿಂದ ತೆಗೆದುಕೊಂಡ ನಿರ್ಧಾರವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.






