ದೇಶದ ಟ್ಯಾಕ್ಸಿ ಉದ್ಯಮದಲ್ಲಿ ಏಕಸ್ವಾಮ್ಯ ಸಾಧಿಸಿರುವ ಖಾಸಗಿ ಕಂಪನಿಗಳಾದ ಓಲಾ (Ola) ಮತ್ತು ಉಬರ್ (Uber) ಅಧಿಪತ್ಯಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕೇಂದ್ರ ಸಹಕಾರಿ ಇಲಾಖೆಯ ಬೆಂಬಲದೊಂದಿಗೆ ಆರಂಭವಾಗುತ್ತಿರುವ ಬಹುನಿರೀಕ್ಷಿತ ‘ಭಾರತ್ ಟ್ಯಾಕ್ಸಿ’ (Bharat Taxi) ಸೇವೆ 2026ರ ಜನವರಿ 1 ರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ಈ ಹೊಸ ಆ್ಯಪ್ ಮೂಲಕ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಸೇವೆ ಹಾಗೂ ಚಾಲಕರಿಗೆ ಹೆಚ್ಚಿನ ಲಾಭವನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ ಇದರ ಆದಾಯ ಹಂಚಿಕೆ ಮಾದರಿ. ಪ್ರಸ್ತುತ ಖಾಸಗಿ ಅಗ್ರಿಗೇಟರ್‌ಗಳು ಚಾಲಕರಿಂದ ಭಾರಿ ಪ್ರಮಾಣದ ಕಮಿಷನ್ ಪಡೆಯುತ್ತಿದ್ದಾರೆ ಎಂಬ ದೂರುಗಳಿವೆ. ಆದರೆ, ‘ಭಾರತ್ ಟ್ಯಾಕ್ಸಿ’ ಅಡಿಯಲ್ಲಿ ಪ್ರಯಾಣದ ದರದ ಶೇ.80 ರಷ್ಟು ಹಣ ನೇರವಾಗಿ ಟ್ಯಾಕ್ಸಿ ಚಾಲಕರಿಗೆ ತಲುಪಲಿದೆ. ಇದು ‘ಶೂನ್ಯ ಕಮಿಷನ್’ ಮಾದರಿಯತ್ತ ಹೆಜ್ಜೆ ಇಡುತ್ತಿದ್ದು, ಚಾಲಕರ ಆರ್ಥಿಕ ಸುಸ್ಥಿರತೆಯನ್ನು ಹೆಚ್ಚಿಸಲು ಸಹಕಾರಿ ತತ್ವದಡಿಯಲ್ಲಿ ಈ ಆ್ಯಪ್ ಕಾರ್ಯನಿರ್ವಹಿಸಲಿದೆ.
ಈ ಸೇವೆಯು ಪ್ರಾಯೋಗಿಕವಾಗಿ ಇದೇ ವರ್ಷದ (2025) ಡಿಸೆಂಬರ್‌ನಲ್ಲಿ ರಾಷ್ಟ ರಾಜಧಾನಿ ದೆಹಲಿಯಲ್ಲಿ ಚಾಲನೆ ಪಡೆಯಲಿದ್ದು, ಹೊಸ ವರ್ಷದ ಆರಂಭದ ದಿನವಾದ ಜನವರಿ 1, 2026 ರಂದು ದೇಶದ ಪ್ರಮುಖ ನಗರಗಳಿಗೆ ವಿಸ್ತರಣೆಯಾಗಲಿದೆ. ಇದು ಕೇವಲ ಒಂದು ನಗರಕ್ಕೆ ಸೀಮಿತವಾಗದೆ, ಪ್ಯಾನ್-ಇಂಡಿಯಾ (Pan-India) ಮಟ್ಟದಲ್ಲಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ‘ಭಾರತ್ ಟ್ಯಾಕ್ಸಿ’ ಆ್ಯಪ್ ಲಭ್ಯವಿದ್ದು, ಚಾಲಕರು ಮತ್ತು ಪ್ರಯಾಣಿಕರು ಈಗಿನಿಂದಲೇ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರದ ಈ ನಡೆಯಿಂದಾಗಿ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಗ್ರಾಹಕರಿಗೆ ನ್ಯಾಯಯುತ ಬೆಲೆ ಮತ್ತು ಚಾಲಕರಿಗೆ ಉತ್ತಮ ಉಳಿತಾಯದ ಭರವಸೆ ನೀಡುತ್ತಿರುವ ಈ ಸಹಕಾರಿ ಆ್ಯಪ್, ಸಾರಿಗೆ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.






