ಶಿವಮೊಗ್ಗ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ‘ಬುರುಡೆ ಪ್ರಕರಣ’ದಲ್ಲಿ (Dharmasthala Skull Case) ಬಂಧಿತರಾಗಿದ್ದ ದೂರುದಾರ ಚಿನ್ನಯ್ಯ ಅವರಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಿಂದ (Central Jail) ಹೊರಬಂದಿದ್ದಾರೆ.
ಬೆಳ್ತಂಗಡಿ ಜೆಎಂಎಫ್‌ಸಿ (JMFC) ನ್ಯಾಯಾಲಯವು ಕಳೆದ ನವೆಂಬರ್ 24ರಂದೇ ಚಿನ್ನಯ್ಯ ಅವರಿಗೆ ಷರತ್ತುಬದ್ಧ ಜಾಮೀನು (Conditional Bail) ಮಂಜೂರು ಮಾಡಿತ್ತು. ಆದರೆ, ನ್ಯಾಯಾಲಯ ವಿಧಿಸಿದ್ದ ವೈಯಕ್ತಿಕ ಬಾಂಡ್ ಸೇರಿದಂತೆ ಸುಮಾರು 12 ಕಠಿಣ ಷರತ್ತುಗಳನ್ನು ಪೂರೈಸಲು ವಿಳಂಬವಾದ ಕಾರಣ, ಜಾಮೀನು ಸಿಕ್ಕರೂ ಅವರು 24 ದಿನಗಳ ಕಾಲ ಜೈಲಿನಲ್ಲೇ ಇರಬೇಕಾಯಿತು. ಇದೀಗ ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಬಿಡುಗಡೆ ಮಾಡಲಾಗಿದೆ.
ಸುರಕ್ಷತಾ ದೃಷ್ಟಿಯಿಂದ ಚಿನ್ನಯ್ಯ ಅವರನ್ನು ಬೆಳ್ತಂಗಡಿಯಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಜೈಲಿನ ‘ಕಾವೇರಿ ಬ್ಯಾರಕ್’ನಲ್ಲಿದ್ದ ಅವರನ್ನು ಅವರ ಪತ್ನಿ ಮತ್ತು ವಕೀಲರು ಬರಮಾಡಿಕೊಂಡರು. ಬಿಡುಗಡೆಯಾದ ಬಳಿಕ ಮಾತನಾಡಿದ ಅವರ ಪರ ವಕೀಲರು, ನ್ಯಾಯಾಲಯದ ಎಲ್ಲಾ ಷರತ್ತುಗಳನ್ನು ಪಾಲಿಸಿ ಚಿನ್ನಯ್ಯ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.






