ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಶಾಲಾ ಬಸ್‌ನಿಂದ ಬಿದ್ದು 4 ವರ್ಷದ ಮಗು ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಗುವಿನ ಸಾವಿನ ನಂತರ ಚಾಲಕ ಮತ್ತು ಕ್ಲೀನರ್ ತೋರಿರುವ ಅಮಾನವೀಯ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಡ್ಡೂರು ಗ್ರಾಮದ ನಿವಾಸಿ ಹಾಗೂ ಸೈನಿಕ ಅರುಣ ಲಮಾಣಿ ಅವರ ಪುತ್ರ ಪ್ರಥಮ (4) ಮೃತಪಟ್ಟ ದುರ್ದೈವಿ. ಈ ಮಗು ಶಿಗ್ಲಿ ಗ್ರಾಮದ ‘ಲಿಟಲ್ ಹಾರ್ಟ್ಸ್’ (Little Hearts) ಶಾಲೆಯಲ್ಲಿ ಎಲ್‌ಕೆಜಿ (LKG) ಓದುತ್ತಿತ್ತು. ಶಾಲಾ ಬಸ್‌ನಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಸ್‌ನಿಂದ ಕೆಳಗೆ ಬಿದ್ದಿದೆ. ಬಿದ್ದ ಸುಮಾರು 300 ಮೀಟರ್ ದೂರದವರೆಗೂ ಬಸ್ ಚಲಿಸಿದೆ ಎಂದು ತಿಳಿದುಬಂದಿದೆ.
ಮಗು ಬಿದ್ದದ್ದನ್ನು ಗಮನಿಸಿದ ಚಾಲಕ ಮತ್ತು ಕ್ಲೀನರ್ (Driver and Cleaner), ಗಾಬರಿಯಿಂದ ಅಥವಾ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅಮಾನವೀಯವಾಗಿ ವರ್ತಿಸಿದ್ದಾರೆ. ಬಿದ್ದು ಪ್ರಾಣ ಕಳೆದುಕೊಂಡಿದ್ದ ಮಗುವನ್ನು ಯಾರಿಗೂ ಹೇಳದೆ ಮತ್ತೆ ಬಸ್‌ನೊಳಗೆ ಎತ್ತಿಹಾಕಿ, ಅಲ್ಲಿಂದ ಪರಾರಿಯಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಪೋಷಕರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಭೇಟಿ ನೀಡಿದ ಲಕ್ಷ್ಮೇಶ್ವರ ಪೊಲೀಸರಿಗೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಾಲೆಗಳು ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿವೆ, ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಮಗುವಿನ ತಂದೆ ಸೈನಿಕನಾಗಿ ದೇಶದ ಸೇವೆ ಮಾಡುತ್ತಿದ್ದರೆ, ಇಲ್ಲಿ ಮಗನ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.






