ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ಪ್ರತಿಪಕ್ಷ ಬಿಜೆಪಿಯ ತೀವ್ರ ವಿರೋಧ ಮತ್ತು ಗದ್ದಲದ ನಡುವೆಯೇ ರಾಜ್ಯ ಕಾಂಗ್ರೆಸ್ ಸರ್ಕಾರವು ‘ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ-2025’ ಅನ್ನು (Hate Speech Bill) ವಿಧಾನಸಭೆಯಲ್ಲಿ ಅಂಗೀಕರಿಸಿದೆ. ವಿಶೇಷವೆಂದರೆ, ದ್ವೇಷ ಭಾಷಣದ ವಿರುದ್ಧ ಇಂತಹದೊಂದು ಪ್ರತ್ಯೇಕ ಹಾಗೂ ಕಠಿಣ ಕಾನೂನು ಜಾರಿಗೆ ತರುತ್ತಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಈ ಹೊಸ ಮಸೂದೆಯ ಅನ್ವಯ, ಇನ್ನು ಮುಂದೆ ದ್ವೇಷ ಭಾಷಣ ಮಾಡುವವರಿಗೆ ಅಥವಾ ಸಮಾಜದಲ್ಲಿ ಅಶಾಂತಿ ಹರಡುವವರಿಗೆ ಸಂಕಷ್ಟ ಎದುರಾಗಲಿದೆ. ತಪ್ಪಿತಸ್ಥರಿಗೆ ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್ 4 ರಂದು ಸಚಿವ ಸಂಪುಟದ ಒಪ್ಪಿಗೆ ಪಡೆದಿದ್ದ ಈ ಮಸೂದೆಯನ್ನು ಗೃಹ ಸಚಿವ ಜಿ.ಪರಮೇಶ್ವರ್ ಅವರು ಡಿ.10 ರಂದು ಸದನದಲ್ಲಿ ಮಂಡಿಸಿದ್ದರು. ಪುನರಾವರ್ತಿತ ಅಪರಾಧಕ್ಕೆ ಈ ಹಿಂದೆ ಪ್ರಸ್ತಾಪಿಸಲಾಗಿದ್ದ 10 ವರ್ಷಗಳ ಜೈಲು ಶಿಕ್ಷೆಯನ್ನು 7 ವರ್ಷಗಳಿಗೆ ಇಳಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಏನಿದು ದ್ವೇಷ ಭಾಷಣ?: ಮಸೂದೆಯ ಪ್ರಕಾರ, ಯಾವುದೇ ವ್ಯಕ್ತಿ (ಬದುಕಿರುವ ಅಥವಾ ಮೃತಪಟ್ಟಿರುವ), ಸಮುದಾಯ, ವರ್ಗ ಅಥವಾ ಗುಂಪಿನ ವಿರುದ್ಧ ದ್ವೇಷ, ವೈಷಮ್ಯ ಅಥವಾ ಅಶಾಂತಿಯನ್ನು ಉಂಟುಮಾಡುವ ಉದ್ದೇಶದಿಂದ ಆಡುವ ಮಾತುಗಳು, ಬರವಣಿಗೆ, ಸನ್ನೆಗಳು, ದೃಶ್ಯ ನಿರೂಪಣೆಗಳು ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದನ್ನು ‘ದ್ವೇಷ ಭಾಷಣ’ ಎಂದು ವ್ಯಾಖ್ಯಾನಿಸಲಾಗಿದೆ.
ಸದನದಲ್ಲಿ ಗದ್ದಲವೋ ಗದ್ದಲ: ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, “ದ್ವೇಷದ ಭಾಷಣ ಮತ್ತು ದ್ವೇಷದ ಅಪರಾಧಗಳಿಂದಾಗಿ ಕರಾವಳಿ ಕರ್ನಾಟಕ ಹೊತ್ತಿ ಉರಿಯುತ್ತಿದೆ” ಎಂದು ನೀಡಿದ ಹೇಳಿಕೆ ಸದನದಲ್ಲಿ ಬೆಂಕಿಯ ಕಿಡಿಯನ್ನೇ ಹೊತ್ತಿಸಿತು. ಈ ಹೇಳಿಕೆಗೆ ಕರಾವಳಿ ಭಾಗದ ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಲ್ಲ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಭಾರೀ ಕೋಲಾಹಲದ ನಡುವೆಯೇ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.






