ಮುಂಬೈ: ಐಷಾರಾಮಿ ಲಂಬೋರ್ಗಿನಿ (Lamborghini) ಕಾರೊಂದನ್ನು ಮುಂಬೈನ ಬಾಂದ್ರಾ-ವರ್ಲಿ ಸೀ ಲಿಂಕ್‌ನಲ್ಲಿ (Bandra-Worli Sea Link) ಬರೋಬ್ಬರಿ 252 ಕಿಲೋಮೀಟರ್ ವೇಗದಲ್ಲಿ ಚಲಾಯಿಸಿದ ಘಟನೆ ನಡೆದಿದ್ದು, ಮುಂಬೈ ಪೊಲೀಸರು ಕಾರನ್ನು ಜಪ್ತಿ ಮಾಡಿದ್ದಾರೆ. ಚಾಲಕನ ಅತಿರೇಕದ ವೇಗ ಕಂಡು ಸ್ವತಃ ಪೊಲೀಸರೇ ದಂಗಾಗಿದ್ದು, ನಿಯಮ ಉಲ್ಲಂಘನೆಗಾಗಿ ಕಠಿಣ ಕ್ರಮ ಜರುಗಿಸಿದ್ದಾರೆ.
ಈ ಘಟನೆ ಡಿಸೆಂಬರ್ 12 ರಂದು ನಡೆದಿದ್ದು, ಕಾರಿನ ಒಳಗಿನಿಂದಲೇ ಚಿತ್ರೀಕರಿಸಲಾದ ವಿಡಿಯೋ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಕಾರಿನ ಸ್ಪೀಡೋಮೀಟರ್ ಮುಳ್ಳು 252 ಕಿ.ಮೀ.ಗೆ ತಲುಪಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಸೀ ಲಿಂಕ್‌ನಲ್ಲಿ ವಾಹನಗಳಿಗೆ ಗರಿಷ್ಠ ವೇಗದ ಮಿತಿ ಗಂಟೆಗೆ 80 ಕಿ.ಮೀ. ಮಾತ್ರ. ಆದರೆ, ಈ ಐಷಾರಾಮಿ ಕಾರಿನ ಚಾಲಕ ನಿಗದಿತ ಮಿತಿಗಿಂತ ಮೂರು ಪಟ್ಟು ಹೆಚ್ಚು ವೇಗದಲ್ಲಿ, ಅಕ್ಕಪಕ್ಕದ ವಾಹನಗಳನ್ನು ಅತಿರೇಕವಾಗಿ ಓವರ್‌ಟೇಕ್ ಮಾಡುತ್ತಾ ಸಾಗಿದ್ದಾನೆ.
ವೈರಲ್ ವಿಡಿಯೋ ಆಧರಿಸಿ ಕಾರ್ಯಪ್ರವೃತ್ತರಾದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ತನಿಖೆಯ ವೇಳೆ ಇದೇ ಕಾರು ಈ ಹಿಂದೆಯೂ ಹಲವು ಬಾರಿ ವೇಗದ ಮಿತಿಯನ್ನು ಉಲ್ಲಂಘಿಸಿರುವುದು ಮತ್ತು ಇದರ ಮೇಲೆ ಹಲವಾರು ದಂಡದ ಚಲನ್‌ಗಳು (Challans) ಬಾಕಿ ಇರುವುದು ಕಂಡುಬಂದಿದೆ. ಸದ್ಯ ವರ್ಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 281 (ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯದ ಚಾಲನೆ) ಮತ್ತು ಮೋಟಾರು ವಾಹನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕನ ಗುರುತು ಪತ್ತೆ ಹಚ್ಚುವ ಕಾರ್ಯ ಮತ್ತು ಮುಂದಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






