ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (KISS) ನಲ್ಲಿ ಕಳೆದ ವಾರ ನಡೆದ 9ನೇ ತರಗತಿಯ ವಿದ್ಯಾರ್ಥಿಯ ನಿಗೂಢ ಸಾ*ವು ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಹಾಸ್ಟೆಲ್‌ನ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸಾ*ವನ್ನಪ್ಪಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ಹೇಳಿಕೊಂಡಿತ್ತು. ಆದರೆ, ಇದು ಆಕಸ್ಮಿಕ ಸಾ*ವಲ್ಲ, ಬದಲಾಗಿ ಊಟದ ವೇಳೆ ‘ಬೇಳೆ ಸಾರು’ (Dal) ಚೆಲ್ಲಿದ ಕ್ಷುಲ್ಲಕ ಕಾರಣಕ್ಕಾಗಿ ಮೂವರು ಸಹಪಾಠಿಗಳೇ ಸೇರಿ ಆತನನ್ನು ಕೊ*ಲೆ ಮಾಡಿದ್ದಾರೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಮೃ*ತ ದುರ್ದೈವಿ ವಿದ್ಯಾರ್ಥಿಯನ್ನು ಕಿಯೋಂಜರ್ ಜಿಲ್ಲೆಯ ಟಿಕಾರ್ಗುಮುರಾ ಗ್ರಾಮದ 14 ವರ್ಷದ ಸಿಬಾ ಮುಂಡಾ ಎಂದು ಗುರುತಿಸಲಾಗಿದೆ. ಡಿಸೆಂಬರ್ 12 ರಂದು ಈತ ಭುವನೇಶ್ವರದ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ಪೊಲೀಸರ ತನಿಖೆಯ ಪ್ರಕಾರ, ಊಟದ ವಿಷಯದಲ್ಲಿ ನಡೆದ ಜಗಳದ ನಂತರ, ಮೂವರು ಅಪ್ರಾಪ್ತ ಸಹಪಾಠಿಗಳು ಸಿಬಾನನ್ನು ಹಾಸ್ಟೆಲ್ ವಾಶ್‌ರೂಮ್‌ಗೆ ಕರೆದೊಯ್ದು ಮನಬಂದಂತೆ ಥಳಿಸಿದ್ದಾರೆ. ನಂತರ ಕುತ್ತಿಗೆ ಹಿಸುಕಿ ಹ*ತ್ಯೆಗೈದಿದ್ದಾರೆ. ಮ*ರಣೋತ್ತರ ಪರೀಕ್ಷೆಯ ವರದಿಯು ಕೂಡ ಇದು ಆಕಸ್ಮಿಕವಾಗಿ ಬಿದ್ದು ಆದ ಸಾ*ವಲ್ಲ, ಬದಲಾಗಿ ಹಲ್ಲೆಯಿಂದ ಆದ ಸಾ*ವು ಎಂಬುದನ್ನು ದೃಢಪಡಿಸಿದೆ.
ಈ ಪ್ರಕರಣದಲ್ಲಿ ಭಾಗಿಯಾದ ಮೂವರು ಅಪ್ರಾಪ್ತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ಬಾಲಾಪರಾಧಿಗಳ ಮಂಡಳಿಯ ಮುಂದೆ ಹಾಜರುಪಡಿಸಿ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.
ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಈ ಕೊ*ಲೆಯನ್ನು ಮುಚ್ಚಿಹಾಕಲು ಯತ್ನಿಸಿದ ಮತ್ತು ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಕಿಸ್ (KISS) ಸಂಸ್ಥೆಯ ಹೆಚ್ಚುವರಿ ಸಿಇಒ ಪ್ರಮೋದ್ ಪಾತ್ರ ಸೇರಿದಂತೆ 8 ಮಂದಿ ಅಧಿಕಾರಿಗಳು ಹಾಗೂ ಶಿಕ್ಷಕರನ್ನು ಭುವನೇಶ್ವರ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಕುರಿತು ಬಾಯಿ ಬಿಡದಂತೆ ಇತರ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ ಗಂಭೀರ ಆರೋಪವೂ ಇವರ ಮೇಲಿದೆ.
ಮಗನ ಸಾ*ವಿನ ಬಗ್ಗೆ ಶಾಲಾ ಆಡಳಿತ ಮಂಡಳಿ ಯಾವುದೇ ಸ್ಪಷ್ಟ ಮಾಹಿತಿ ಅಥವಾ ವೈದ್ಯಕೀಯ ದಾಖಲೆಗಳನ್ನು ನೀಡಿರಲಿಲ್ಲ ಎಂದು ಮೃ*ತ ಬಾಲಕನ ತಂದೆ ರಘುನಾಥ್ ಮುಂಡಾ ಅವರು ಆರೋಪಿಸಿ, ಶ*ವವಿಟ್ಟು ಪ್ರತಿಭಟನೆ ನಡೆಸಿದ್ದರು. ಕೇವಲ ಮಗ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಸುಳ್ಳು ಹೇಳಿ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಅವರು ದೂರಿದ್ದರು. ಸದ್ಯ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಬಾಲಕನಿಗೆ ಚಿಕಿತ್ಸೆ ನೀಡಿದ ಏಳು ವೈದ್ಯರನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.






