ಬೆಂಗಳೂರು: ಕುದುರೆಗಳಿಗೆ ತಗುಲುವ ಮಾರಕ ‘ಗ್ಲಾಂಡರ್ಸ್’ (Glanders) ಸಾಂಕ್ರಾಮಿಕ ರೋಗವು ಸಿಲಿಕಾನ್ ಸಿಟಿಯಲ್ಲಿ ಕಾಣಿಸಿಕೊಂಡಿದೆ. ಈ ಕುರಿತಂತೆ ಬೆಂಗಳೂರು ಟರ್ಫ್ ಕ್ಲಬ್‌ನ (Bengaluru Turf Club)ಕುದುರೆಗಳಲ್ಲಿ ಈ ರೋಗ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಕಠಿಣ ಕ್ರಮಗಳಿಗೆ ಆದೇಶಿಸಿದ್ದಾರೆ.
ರೋಗ ಪತ್ತೆಯಾದ ಟರ್ಫ್ ಕ್ಲಬ್ ಸುತ್ತಲಿನ 2 ಕಿ.ಮೀ. ವ್ಯಾಪ್ತಿಯನ್ನು ‘ಗ್ಲಾಂಡರ್ಸ್ ರೋಗ ಪೀಡಿತ ಪ್ರದೇಶ’ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಕುದುರೆಗಳ (Horse) ಪ್ರವೇಶ ಮತ್ತು ಚಲನವಲನವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಲ್ಲದೆ, ನಗರದಲ್ಲಿ ನಡೆಯುವ ಮೆರವಣಿಗೆಗಳು, ಮದುವೆ ಹಾಗೂ ಶುಭಕಾರ್ಯಗಳಲ್ಲಿ ಕುದುರೆಗಳನ್ನು ಬಳಸದಂತೆ ಸೂಚಿಸಲಾಗಿದೆ.
ಮನುಷ್ಯರಿಗೂ ಹರಡುವ ಅಪಾಯ:
ಗ್ಲಾಂಡರ್ಸ್ ಕೇವಲ ಪ್ರಾಣಿಗಳಿಗೆ ಸೀಮಿತವಲ್ಲ, ಇದು ಕುದುರೆಗಳಿಂದ ಮನುಷ್ಯರಿಗೂ ಹರಡುವ (Zoonotic) ಸಾಧ್ಯತೆ ಹೆಚ್ಚಿದೆ. ಕಲುಷಿತ ನೀರು, ಆಹಾರ ಮತ್ತು ರೋಗಪೀಡಿತ ಕುದುರೆಗಳ ನೇರ ಸಂಪರ್ಕದಿಂದ ಇದು ಹರಡಬಹುದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ರೋಗದ ಲಕ್ಷಣಗಳು (Symptoms)
| ಮನುಷ್ಯರಲ್ಲಿ ಲಕ್ಷಣಗಳು | ಪ್ರಾಣಿಗಳಲ್ಲಿ ಲಕ್ಷಣಗಳು |
| 1. ತೀವ್ರ ಜ್ವರ ಮತ್ತು ಚಳಿ | 1. ಅಧಿಕ ಜ್ವರ |
| 2. ಸ್ನಾಯು ನೋವು ಮತ್ತು ದೌರ್ಬಲ್ಯ | 2. ಮೂಗಿನಿಂದ ಕೀವು ಬರುವುದು |
| 3. ಉಸಿರಾಟದ ತೊಂದರೆ, ಎದೆ ನೋವು | 3. ಮೂಗಿನ ಒಳಭಾಗದಲ್ಲಿ ಗಾಯ |
| 4. ಚರ್ಮದ ಮೇಲೆ ಗಾಯಗಳು | 4. ಚರ್ಮದ ಮೇಲೆ ಗಂಟುಗಳು ಕಾಣಿಸುವುದು |
| 5. ಮೂಗು, ಬಾಯಿಯಿಂದ ಕೀವು ಸುರಿಯುವುದು | 5. ತೀವ್ರ ನಿಶ್ಯಕ್ತಿ ಮತ್ತು ತೂಕ ಇಳಿಕೆ |
| 6. ಗಂಭೀರ ಸ್ಥಿತಿಯಲ್ಲಿ ರಕ್ತದ ಸೋಂಕು | 6. ಉಸಿರಾಟದ ಸಮಸ್ಯೆ |






