Home State Politics National More
STATE NEWS

ಬೆಂಗಳೂರಿನಲ್ಲೊಂದು ‘ಸೀರೆ’ Christmas Tree! ಹಳೆಯ ಸೀರೆಗಳಿಂದ ಅರಳಿತು 25 ಅಡಿ ಎತ್ತರದ ಪರಿಸರ ಸ್ನೇಹಿ ಮರ

Bengaluru church eco friendly christmas tree made of old sarees
Posted By: Sagaradventure
Updated on: Dec 19, 2025 | 8:05 AM

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರೈಮ್‌ರೋಸ್ ಮಾರ್ ಥೋಮಾ ಚರ್ಚ್ (Primrose Mar Thoma Church) ಈ ಬಾರಿಯ ಕ್ರಿಸ್ಮಸ್ ಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಪರಿಸರ ಕಾಳಜಿಯ ಸಂದೇಶ ಸಾರುವ ನಿಟ್ಟಿನಲ್ಲಿ, ಹಳೆಯ ಮತ್ತು ಹರಿದ ಸೀರೆಗಳನ್ನು ಬಳಸಿಕೊಂಡು ಬರೋಬ್ಬರಿ 25 ಅಡಿ ಎತ್ತರದ ಬೃಹತ್ ಪರಿಸರ ಸ್ನೇಹಿ ಕ್ರಿಸ್ಮಸ್ ಟ್ರೀಯನ್ನು (Christmas Tree) ನಿರ್ಮಿಸುವ ಮೂಲಕ ಎಲ್ಲರ ಹುಬ್ಬೇರಿಸಿದೆ.

ಚರ್ಚ್‌ನ ಕ್ವೈರ್ (Choir) ಅಥವಾ ಗಾಯನ ವೃಂದದ ಸದಸ್ಯರು ಈ ಸೃಜನಶೀಲ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ. ಚರ್ಚ್‌ ಸದಸ್ಯರ ಮನೆಯಲ್ಲಿದ್ದ ಬಳಕೆಯಾಗದ ಮತ್ತು ಹಳೆಯ ಸೀರೆಗಳನ್ನು ಸಂಗ್ರಹಿಸಿ, ಅವುಗಳನ್ನು ವಿವಿಧ ಅಳತೆಯ ಲೋಹದ ತಂತಿಯ ಚೌಕಟ್ಟುಗಳಿಗೆ (Metal wire frames) ಅಂದವಾಗಿ ಜೋಡಿಸಿ ಈ ಮರವನ್ನು ಸಿದ್ಧಪಡಿಸಲಾಗಿದೆ. ನಮ್ಮ ಮನೆಯಲ್ಲಿಯೇ ಸುಮ್ಮನೆ ಬಿದ್ದಿರುವ ವಸ್ತುಗಳನ್ನು ಬಳಸಿಕೊಂಡು ಹಬ್ಬದ ಅಲಂಕಾರಗಳನ್ನು ಎಷ್ಟು ಸುಂದರವಾಗಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಮಾಡಬಹುದು ಎಂಬ ಜಾಗೃತಿ ಮೂಡಿಸುವುದು ಈ ವಿಶಿಷ್ಟ ಪ್ರಯತ್ನದ ಉದ್ದೇಶವಾಗಿದೆ.

ಈ ಚರ್ಚ್‌ಗೆ ಇಂತಹ ಪರಿಸರ ಸ್ನೇಹಿ ಆಚರಣೆ ಹೊಸದೇನಲ್ಲ. 2008ರಲ್ಲೇ ಪ್ಲಾಸ್ಟಿಕ್ ಬಾಟಲಿ ಮತ್ತು ಹಳೆಯ ಟೈರ್‌ಗಳನ್ನು ಬಳಸಿ ಕ್ರಿಸ್ಮಸ್ ಟ್ರೀ ಮಾಡುವ ಮೂಲಕ ಈ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿತ್ತು. ಕಳೆದ 15 ವರ್ಷಗಳಲ್ಲಿ ವಿಡಿಯೋ ಟೇಪ್‌ಗಳು, ಹಳೆಯ ಪತ್ರಿಕೆಗಳು, ಬಟ್ಟೆ ತುಂಡುಗಳು, ಎಳನೀರಿನ ಚಿಪ್ಪುಗಳು, ಒಣ ಹುಲ್ಲು, ಅಲ್ಯೂಮಿನಿಯಂ ಫಾಯಿಲ್ ಹಾಗೂ ಬಿದಿರಿನಂತಹ ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡಿ ಅದ್ಭುತ ಕಲಾಕೃತಿಗಳನ್ನು ರಚಿಸಲಾಗಿದೆ.

ತ್ಯಾಜ್ಯ ನಿರ್ವಹಣೆ ಮತ್ತು ಜವಾಬ್ದಾರಿಯುತ ಬಳಕೆಯ ಮಹತ್ವವನ್ನು ಸಾರಲು ಕೆಲವು ಬಾರಿ ಕೈಗಾರಿಕೆಗಳಿಂದಲೂ ತ್ಯಾಜ್ಯ ವಸ್ತುಗಳನ್ನು ಪಡೆದು ಅಲಂಕಾರಕ್ಕೆ ಬಳಸಲಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಪರಿಸರ ಜವಾಬ್ದಾರಿಯೂ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿರುವ ಈ ಸುಂದರ ಕ್ರಿಸ್ಮಸ್ ಟ್ರೀಯನ್ನು ವೀಕ್ಷಿಸಲು ಸಾರ್ವಜನಿಕರಿಗೂ ಚರ್ಚ್ ಆಹ್ವಾನ ನೀಡಿದೆ.

Shorts Shorts