ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿಗಳು ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಗುರಿ ಬದಲಿಸಿಲ್ಲ. ಶತಾಯಗತಾಯ ತಾವೇ ಮುಂದಿನ ಬಜೆಟ್ ಮಂಡಿಸುವುದಾಗಿ ಪಣ ತೊಟ್ಟಿರುವ ಸಿಎಂ, ಅದಕ್ಕಾಗಿ ಪೂರ್ವಭಾವಿ ಸಭೆಗಳನ್ನು ನಡೆಸಲು ಸಿದ್ಧತೆ ನಡೆಸಿದ್ದಾರೆ.
ಡಿಸಿಎಂ (DCM) ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಮಟ್ಟದಲ್ಲಿ ನಡೆಸುತ್ತಿರುವ ಸರಣಿ ಸಭೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ, ಆಡಳಿತದ ಮೇಲೆ ಬಿಗಿ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ಈಗಾಗಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಹೊಂದಿರುವ ಸಿದ್ದರಾಮಯ್ಯ, ಈಗ ತಮ್ಮ 17ನೇ ಬಜೆಟ್ (17th Budget) ಮಂಡಿಸಲು ಸಿದ್ಧರಾಗುತ್ತಿದ್ದಾರೆ.
ಈ ತಿಂಗಳ ಕೊನೆಯ ವಾರದಲ್ಲಿ ಸಿಡಬ್ಲ್ಯೂಸಿ (CWC) ಸಭೆಗಾಗಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದು, ಆ ವೇಳೆ ಹೈಕಮಾಂಡ್ ಜೊತೆ ಬಜೆಟ್ ಮತ್ತು ರಾಜಕೀಯ ಸ್ಥಿತಿಗತಿ ಬಗ್ಗೆಯೂ ಚರ್ಚಿಸುವ ಸಾಧ್ಯತೆಯಿದೆ.
ಅಧಿವೇಶನ ಮುಗಿಯುತ್ತಿದ್ದಂತೆ ಮತ್ತಷ್ಟು ಆಕ್ರಮಣಕಾರಿ ಆಗಿರುವ ಸಿಎಂ, “ನಾನೇ ಬಜೆಟ್ ಮಂಡಿಸುತ್ತೇನೆ” ಎಂದು ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ವಿರೋಧಿ ಬಣಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ರಾಜಕೀಯ ಏನೇ ಇರಲಿ, ಅಭಿವೃದ್ಧಿ ಮತ್ತು ಬಜೆಟ್ ವಿಚಾರದಲ್ಲಿ ತಾವೇ ಮುಂಚೂಣಿಯಲ್ಲಿ ಇರಬೇಕೆಂಬುದು ಸಿದ್ದರಾಮಯ್ಯ ಅವರ ಪ್ಲಾನ್ ಆಗಿದೆ.






