ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅಂತೆ ಜಗದೀಶ್ವರಿ ದೇಗುಲಕ್ಕೆ (Jagadeeshwari Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಬಗ್ಗೆ ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿರುವ ‘ಸಿಎಂ’ ಗದ್ದುಗೆಯ ಗುಟ್ಟು ಕೊನೆಗೂ ರಟ್ಟಾದಂತಿದೆ.
ದೇವಿಯ ಮುಂದೆ ಪೂಜೆ ಮುಗಿಸಿ ಹೊರಬಂದ ಡಿಕೆಶಿಯವರನ್ನು ಪತ್ರಕರ್ತರು “ದೇವಿ ಈ ಬಾರಿ ಸಿಎಂ ಆಗುವ ದಿನಾಂಕವನ್ನು ತಿಳಿಸಿದಳಾ?” ಎಂದು ಪ್ರಶ್ನಿಸಿದಾಗ, ಅವರು ಯಾವುದೇ ನೇರ ಉತ್ತರ ನೀಡದೆ ಮಾರ್ಮಿಕವಾಗಿ ನಕ್ಕು ತಲೆ ಅಲ್ಲಾಡಿಸಿದ್ದಾರೆ. ಇದು ಅವರು ಪರೋಕ್ಷವಾಗಿ ದೇವಿಯ ಕಡೆಯಿಂದ ಶುಭ ಶಕುನ ಸಿಕ್ಕಿದೆ ಎಂಬುದನ್ನು ಒಪ್ಪಿಕೊಂಡಂತೆ ಭಾಸವಾಗುತ್ತಿದೆ.
ಅಧಿಕಾರ ಒಪ್ಪಂದದ ಬಗ್ಗೆ ಮೌನ ಮುರಿದ ಡಿಕೆಶಿ:
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ತಮ್ಮ ನಡುವಿನ ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡಿದ ಡಿಕೆಶಿ, “ನಾವಿಬ್ಬರೂ (ಸಿದ್ದರಾಮಯ್ಯ ಮತ್ತು ನಾನು) ಒಂದು ಒಪ್ಪಂದಕ್ಕೆ ಬಂದಿದ್ದೇವೆ. ಹೈಕಮಾಂಡ್ ಕೂಡ ನಮ್ಮನ್ನು ಒಂದು ಒಪ್ಪಂದಕ್ಕೆ ತಂದಿದೆ. ಆ ಬಗ್ಗೆ ನಾವಿಬ್ಬರೂ ಮುಕ್ತವಾಗಿ ಮಾತನಾಡಿಕೊಂಡಿದ್ದೇವೆ” ಎಂದು ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿ ಇರಲ್ಲ ಅಂತ ನಾನು ಎಲ್ಲಿಯೂ ಹೇಳಿಲ್ಲ. ಹೈಕಮಾಂಡ್ (High Command) ಬೆಂಬಲ ಇರುವವರೆಗೆ ಅವರು ಸಿಎಂ ಆಗಿ ಮುಂದುವರಿಯುತ್ತಾರೆ ಎನ್ನುವ ಮೂಲಕ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂಬ ಸಂದೇಶ ನೀಡಿದ್ದಾರೆ.
ಜಗದೀಶ್ವರಿ ದೇವಿಯ ದರ್ಶನದ ಬಳಿಕ ಡಿಕೆಶಿ ನೀಡಿರುವ ಈ ಹೇಳಿಕೆಗಳು ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗಳನ್ನು ಹುಟ್ಟುಹಾಕಿವೆ.






