ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಮುರುಡೇಶ್ವರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳ ರಕ್ಷಣೆಗೆ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಅಭಿಯಾನವನ್ನೇ ಆರಂಭಿಸಿದೆ. ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಸಂಭವಿಸಬಹುದಾದ ದುರಂತಗಳನ್ನು ತಡೆಯಲು ಪೊಲೀಸರು ಕಡಲತೀರದಲ್ಲೇ ಜಾಗೃತಿ ಪಾಠ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮುರುಡೇಶ್ವರ ಬೀಚ್‌ನಲ್ಲಿ ಅಲೆಗಳ ಅಬ್ಬರ, ಆಳ ಮತ್ತು ಒಳಹರಿವಿನ ಬಗ್ಗೆ ಅರಿವಿಲ್ಲದೆ ನೀರಿಗಿಳಿದು ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ನಡೆದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸರು, ಶಾಲಾ ಮಕ್ಕಳ ಗುಂಪು ಬೀಚ್‌ಗೆ ಬರುತ್ತಿದ್ದಂತೆಯೇ ಅವರನ್ನು ಭೇಟಿ ಮಾಡಿ ಅಪಾಯಗಳ ಬಗ್ಗೆ ಎಚ್ಚರಿಸುತ್ತಿದ್ದಾರೆ.
5,000 ವಿದ್ಯಾರ್ಥಿಗಳಿಗೆ ಜಾಗೃತಿ:
ಈಗಾಗಲೇ ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ದಾವಣಗೆರೆ, ಶಿವಮೊಗ್ಗ, ಹಾವೇರಿ ಮತ್ತು ತುಮಕೂರು ಜಿಲ್ಲೆಗಳ ವಿವಿಧ ಶಾಲೆಗಳಿಂದ ಆಗಮಿಸಿದ ಸುಮಾರು 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೊಲೀಸರು ಸ್ಥಳದಲ್ಲೇ ಜಾಗೃತಿ ಮೂಡಿಸಿದ್ದಾರೆ. ಪರಿಣಾಮವಾಗಿ, ಇತ್ತೀಚಿನ ದಿನಗಳಲ್ಲಿ ಶಾಲಾ ಪ್ರವಾಸದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ ಎಂದು ಇಲಾಖೆ ತಿಳಿಸಿದೆ.
ಪ್ರವಾಸಿಗರಿಗೆ ಕಟ್ಟುನಿಟ್ಟಿನ ಸೂಚನೆಗಳು:
ಪ್ರವಾಸಿಗರ ಜೀವ ರಕ್ಷಣೆಯ ದೃಷ್ಟಿಯಿಂದ ಪೊಲೀಸ್ ಇಲಾಖೆ ಈ ಕೆಲವೊಂದು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಚ್ಚರಿಕೆ ನೀಡಿದೆ. ಮುರುಡೇಶ್ವರ ಬೀಚ್‌ನಲ್ಲಿ ಬಲವಾದ ಅಲೆಗಳು ಮತ್ತು ಒಳಹರಿವು ಇರುವುದರಿಂದ ಈಜಲು ಇಳಿಯುವುದನ್ನು ಆದಷ್ಟು ತಪ್ಪಿಸುವಂತೆ ತಿಳಿಸಿದ್ದಾರೆ. ‘ಈಜಲು ನಿಷೇಧ’ ಫಲಕವಿರುವ ಕಡೆ ನೀರಿಗೆ ಇಳಿಯುವ ಸಾಹಸ ಬೇಡ ಹಾಗೂ ಮದ್ಯಪಾನ ಮಾಡಿ ಸಮುದ್ರಕ್ಕೆ ಇಳಿಯುವುದೇ ಹೆಚ್ಚಿನ ದುರಂತಗಳಿಗೆ ಕಾರಣವಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಇನ್ನು ಅಲೆಗಳ ಸಮೀಪ ನಿಂತು ಸೆಲ್ಫಿ ಅಥವಾ ರೀಲ್ಸ್ ಮಾಡುವುದು ಜೀವಕ್ಕೆ ಕುತ್ತು ತರಬಹುದು. ಸಮುದ್ರ ತೀರದಲ್ಲಿ ಮಕ್ಕಳನ್ನು ಒಂಟಿಯಾಗಿ ಬಿಡಬಾರದು. ಲೈಫ್‌ಗಾರ್ಡ್ ಮತ್ತು ಪೊಲೀಸರ ಸೂಚನೆ ಮೀರಿ ವರ್ತಿಸಬಾರದು. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣವೇ ಸಮೀಪದ ಪೊಲೀಸ್ ಠಾಣೆ ಅಥವಾ 112 ಸಹಾಯವಾಣಿಗೆ ಕರೆ ಮಾಡುವಂತೆ ಕೋರಲಾಗಿದೆ.






