ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ (Pavithra Gowda), ಎ2 ಆರೋಪಿ ನಟ ದರ್ಶನ್ (Darshan) ಅವರನ್ನು ಭೇಟಿ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಪವಿತ್ರಾ ಅವರ ಭೇಟಿಗೆ ನಟ ದರ್ಶನ್ ನಯವಾಗಿಯೇ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಜೈಲಿಗೆ ಭೇಟಿ ನೀಡಿದ್ದ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಅವರ ಬಳಿ ಪವಿತ್ರಾ ಗೌಡ, ದರ್ಶನ್ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದರು. ಕಾನೂನಿನಲ್ಲಿ ಅವಕಾಶವಿದ್ದರೆ ಪರಿಶೀಲಿಸುವುದಾಗಿ ಡಿಜಿಪಿ ತಿಳಿಸಿದ್ದರು. ಇದನ್ನು ನೆಪವಾಗಿಟ್ಟುಕೊಂಡು ಪವಿತ್ರಾ ಗೌಡ ಭೇಟಿಗೆ ಮುಂದಾದರೂ, ಆದರೆ ದರ್ಶನ್ ಯಾವುದೇ ಕಾರಣಕ್ಕೂ ಪವಿತ್ರಾ ಗೌಡ ಭೇಟಿ ಮಾಡಲ್ಲ ಅಂತಿದ್ದಾರಂತೆ ಎಂದು ತಿಳಿದುಬಂದಿದೆ.
ದರ್ಶನ್ ನಿರಾಕರಣೆಗೆ ಕಾರಣವೇನು?
“ನಿನ್ನಿಂದಲೇ ನಾನು ಇಂದು ಈ ಪರಿಸ್ಥಿತಿಗೆ ಬಂದಿದ್ದೇನೆ” ಎಂಬ ಆಕ್ರೋಶ ದರ್ಶನ್ ಅವರಲ್ಲಿ ಮನೆಮಾಡಿದೆಯೇ ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿಯೇ ಪವಿತ್ರಾ ಅವರನ್ನು ಭೇಟಿ ಮಾಡಲು ಅವರು ಒಪ್ಪುತ್ತಿಲ್ಲ ಎಂಬ ಮಾತುಗಳು ಜೈಲಿನ ಆವರಣದಲ್ಲಿ ಕೇಳಿಬರುತ್ತಿವೆ. ತನ್ನನ್ನು ನೋಡಲು ಬಂದವರ ಬಳಿ ದರ್ಶನ್ ಕೇವಲ ಕಾನೂನು ಹೋರಾಟ ಮತ್ತು ಕೇಸ್‌ನ ಟ್ರಯಲ್ ಬಗ್ಗೆ ಮಾತ್ರ ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ.
ಪ್ರಕರಣದ ಟ್ರಯಲ್ ಶುರುವಾಗಿರುವುದರಿಂದ ಅದರ ಬಗ್ಗೆ ಚರ್ಚಿಸಲು ದರ್ಶನ್ ಅವರನ್ನು ಭೇಟಿ ಮಾಡುವುದು ಅನಿವಾರ್ಯ ಎಂದು ಪವಿತ್ರಾ ಗೌಡ ಭಾವಿಸಿದ್ದಾರೆ. ಆದರೆ, ದರ್ಶನ್ ಅವರ ಈ ‘ನೀರಸ’ ಪ್ರತಿಕ್ರಿಯೆ ಪವಿತ್ರಾ ಗೌಡ ಅವರ ಆಸೆಗೆ ತಣ್ಣೀರು ಸುರಿಸಿದಂತಾಗಿದೆ.






