ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (MGNREGA) ಬದಲಿಸಿ, ನೂತನವಾಗಿ ಜಾರಿಗೆ ತರಲಾದ ‘ವಿಬಿ-ಜಿ ರಾಮ್ ಜಿ’ (VB-G RAM G) ಮಸೂದೆಯ ವಿರುದ್ಧ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರ್ಕಾರವು ಕಳೆದ 20 ವರ್ಷಗಳ ನರೇಗಾ ಯೋಜನೆಯ ಸಾಧನೆಯನ್ನು ಕೇವಲ ಒಂದೇ ದಿನದಲ್ಲಿ ಧ್ವಂಸ ಮಾಡಿದೆ ಮತ್ತು ಈ ಹೊಸ ಮಸೂದೆ ಸಂಪೂರ್ಣವಾಗಿ ‘ಗ್ರಾಮ ವಿರೋಧಿ’ ಎಂದು ಅವರು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ವಿಬಿ-ಜಿ ರಾಮ್ ಜಿ ಮಸೂದೆಯು ಹಳೆಯ ಯೋಜನೆಯ ಸುಧಾರಣೆಯಲ್ಲ. ಬದಲಾಗಿ, ಇದು ಹಕ್ಕು ಆಧಾರಿತ ಮತ್ತು ಬೇಡಿಕೆ ಆಧಾರಿತವಾಗಿದ್ದ ಉದ್ಯೋಗ ಖಾತ್ರಿಯನ್ನು, ದೆಹಲಿಯಿಂದ ನಿಯಂತ್ರಿಸಲ್ಪಡುವ ಪಡಿತರ ಮಾದರಿಯ ಯೋಜನೆಯನ್ನಾಗಿ ಬದಲಿಸಿದೆ. ಇದರ ವಿನ್ಯಾಸವೇ ರಾಜ್ಯ ಮತ್ತು ಗ್ರಾಮ ವಿರೋಧಿಯಾಗಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯು ಗ್ರಾಮೀಣ ಕಾರ್ಮಿಕರಿಗೆ ನೀಡುತ್ತಿದ್ದ ಚೌಕಾಶಿ ಶಕ್ತಿಯನ್ನು (bargaining power) ಕಸಿದುಕೊಳ್ಳಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ಕೋವಿಡ್ ಸಂಕಷ್ಟದ ಸಮಯದಲ್ಲಿ ಆರ್ಥಿಕತೆ ಕುಸಿದಾಗ, ಕೋಟ್ಯಂತರ ಜನರನ್ನು ಹಸಿವು ಮತ್ತು ಸಾಲದ ಸುಳಿಯಿಂದ ಪಾರು ಮಾಡಿದ್ದು ಇದೇ ನರೇಗಾ ಯೋಜನೆ. ಈ ಯೋಜನೆಯಡಿ ವರ್ಷದಿಂದ ವರ್ಷಕ್ಕೆ ಮಹಿಳೆಯರೇ ಅರ್ಧಕ್ಕಿಂತ ಹೆಚ್ಚು ಕೆಲಸ ನಿರ್ವಹಿಸಿದ್ದಾರೆ. ಆದರೆ ಈಗ ಕೆಲಸದ ಮೇಲೆ ಮಿತಿ ಹೇರುವ ಮೂಲಕ ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಅತ್ಯಂತ ಬಡ ಹಿಂದುಳಿದ ವರ್ಗಗಳನ್ನು (OBC) ಉದ್ಯೋಗದಿಂದ ಹೊರದಬ್ಬಲು ಸರ್ಕಾರ ಸಂಚು ರೂಪಿಸಿದೆ” ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಯಾವುದೇ ಸೂಕ್ತ ಪರಿಶೀಲನೆ ಇಲ್ಲದೆ, ವಿರೋಧ ಪಕ್ಷಗಳ ಬೇಡಿಕೆಯನ್ನು ಧಿಕ್ಕರಿಸಿ ಮಸೂದೆಯನ್ನು ಸಂಸತ್ತಿನಲ್ಲಿ ಬಲವಂತವಾಗಿ ಅಂಗೀಕರಿಸಲಾಗಿದೆ ಎಂದು ರಾಹುಲ್ ದೂರಿದ್ದಾರೆ. “ಗ್ರಾಮೀಣ ಭಾರತದ ಕಾರ್ಮಿಕ ಶಕ್ತಿಯನ್ನು ಕುಗ್ಗಿಸುವುದು ಮತ್ತು ಅಧಿಕಾರವನ್ನು ಕೇಂದ್ರೀಕರಿಸುವುದೇ ಪ್ರಧಾನಿ ಮೋದಿಯವರ ಸ್ಪಷ್ಟ ಗುರಿಯಾಗಿದೆ. ಗ್ರಾಮೀಣ ಬಡವರ ಕೊನೆಯ ರಕ್ಷಣಾ ಪಡೆಯಂತಿರುವ ಈ ಯೋಜನೆಯನ್ನು ನಾಶಮಾಡಲು ನಾವು ಬಿಡುವುದಿಲ್ಲ. ಈ ಕಾನೂನನ್ನು ಹಿಂಪಡೆಯುವವರೆಗೂ ನಾವು ದೇಶಾದ್ಯಂತ ಹೋರಾಟ ನಡೆಸುತ್ತೇವೆ” ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ರಾತ್ರಿಯಷ್ಟೇ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೂ ರಾಜ್ಯಸಭೆಯಲ್ಲಿ ‘ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ)’ ಅಥವಾ ‘ವಿಬಿ-ಜಿ ರಾಮ್ ಜಿ’ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿತ್ತು. ಈ ಮಸೂದೆಗೆ ಮಹಾತ್ಮ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ ಮತ್ತು ಆರ್ಥಿಕ ಹೊರೆಯನ್ನು ರಾಜ್ಯಗಳ ಮೇಲೆ ಹಾಕುತ್ತಿರುವುದಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.






