ಗುವಾಹಟಿ: ಅಸ್ಸಾಂನ ಹೋಜೈ ಜಿಲ್ಲೆಯಲ್ಲಿ ಶನಿವಾರ ನಸುಕಿನ ಜಾವ ಮನಕಲಕುವ ದುರಂತವೊಂದು ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಸೈರಾಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಹಳಿ ದಾಟುತ್ತಿದ್ದ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 7 ಆನೆಗಳು ಮೃ*ತಪಟ್ಟಿವೆ. ಈ ಘಟನೆಯ ತೀವ್ರತೆಗೆ ರೈಲಿನ ಎಂಜಿನ್ ಮತ್ತು 5 ಬೋಗಿಗಳು ಹಳಿ ತಪ್ಪಿವೆ.
ಶನಿವಾರ ಮುಂಜಾನೆ 2:17ರ ಸುಮಾರಿಗೆ ಲುಮ್ಡಿಂಗ್ ವಿಭಾಗದ ಜಮುನಾಮುಖ್-ಕಂಪುರ್ ನಡುವೆ ಈ ದುರ್ಘಟನೆ ನಡೆದಿದೆ. ಹಳಿಯ ಮೇಲೆ ಆನೆಗಳ ಹಿಂಡನ್ನು ಕಂಡ ಲೋಕೋ ಪೈಲಟ್ ತಕ್ಷಣವೇ ತುರ್ತು ಬ್ರೇಕ್ (Emergency Brake) ಹಾಕಿದರೂ, ರೈಲು ಅಷ್ಟು ಹೊತ್ತಿಗಾಗಲೇ ಆನೆಗಳಿಗೆ ಬಲವಾಗಿ ಡಿಕ್ಕಿ ಹೊಡೆದಿತ್ತು.
“ಮೃ*ತಪಟ್ಟ ಆನೆಗಳಲ್ಲಿ ಮೂರು ವಯಸ್ಕ ಆನೆಗಳು ಹಾಗೂ ನಾಲ್ಕು ಮರಿ ಆನೆಗಳು ಸೇರಿವೆ. ಮತ್ತೊಂದು ಮರಿ ಆನೆಗೆ ಗಾಯಗಳಾಗಿದ್ದು, ಮೃ*ತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ” ಎಂದು ನಾಗಾಂವ್ ಅರಣ್ಯ ವಿಭಾಗದ ಅಧಿಕಾರಿ ಸುಹಾಸ್ ಕದಮ್ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ರೈಲಿನ ಬೋಗಿಗಳು ಹಳಿ ತಪ್ಪಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಈಶಾನ್ಯ ಗಡಿ ರೈಲ್ವೆ (NFR) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹಳಿ ತಪ್ಪಿದ ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ರೈಲಿನ ಇತರ ಬೋಗಿಗಳಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದ್ದು, ರೈಲನ್ನು ಗುವಾಹಟಿಗೆ ಕಳುಹಿಸಲಾಗಿದೆ. ಅಲ್ಲಿ ಹೊಸ ಬೋಗಿಗಳನ್ನು ಜೋಡಿಸಿ ದೆಹಲಿಯತ್ತ ಪ್ರಯಾಣ ಮುಂದುವರಿಸಲಿದೆ.
ಘಟನೆ ನಡೆದ ಸ್ಥಳವು ಆನೆಗಳ ಸಂಚಾರಕ್ಕೆ ಗುರುತಿಸಲಾದ ‘ಎಲಿಫೆಂಟ್ ಕಾರಿಡಾರ್’ ಆಗಿರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅರಣ್ಯ ಇಲಾಖೆ ಮತ್ತು ರೈಲ್ವೆ ನಡುವಿನ ಸಮನ್ವಯದ ಕೊರತೆಯೇ ಇಂತಹ ಪ್ರಾಣಿ ಹತ್ಯೆಗೆ ಕಾರಣ ಎಂದು ವನ್ಯಜೀವಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆಗಳನ್ನು (0361-2731621/ 22/ 23) ಆರಂಭಿಸಲಾಗಿದೆ.






