ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂ ಯುವಕನೊಬ್ಬನನ್ನು ದೈವದೂಷಣೆ (blasphemy) ಆರೋಪದ ಮೇಲೆ ಗುಂಪೊಂದು ಥಳಿಸಿ ಹತ್ಯೆಗೈದು, ಶ*ವಕ್ಕೆ ಬೆಂಕಿ ಹಚ್ಚಿದ ಭೀಕರ ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಮಧ್ಯಂತರ ಸರ್ಕಾರ ಶನಿವಾರ ಪ್ರಕಟಿಸಿದೆ.
ಮೈಮನ್‌ಸಿಂಗ್ ನಗರದಲ್ಲಿ ಗುರುವಾರ ಈ ಅಮಾನವೀಯ ಘಟನೆ ನಡೆದಿದೆ. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ದೀಪು ಚಂದ್ರ ದಾಸ್ ಎಂಬುವವರ ಮೇಲೆ ದೈವದೂಷಣೆ ಆರೋಪ ಹೊರಿಸಿದ ದುಷ್ಕರ್ಮಿಗಳ ಗುಂಪು, ಕಾರ್ಖಾನೆಯ ಹೊರಗೆ ಅವರನ್ನು ಎಳೆದೊಯ್ದು ಮನಬಂದಂತೆ ಥಳಿಸಿದೆ. ಬಳಿಕ ಮರಕ್ಕೆ ನೇಣು ಹಾಕಿ ಹ*ತ್ಯೆ ಮಾಡಿದೆ. ರೊಚ್ಚಿಗೆದ್ದ ಗುಂಪು ಅಷ್ಟಕ್ಕೇ ಸುಮ್ಮನಾಗದೆ, ಢಾಕಾ-ಮೈಮನ್‌ಸಿಂಗ್ ಹೆದ್ದಾರಿಯ ಬದಿಯಲ್ಲಿ ದೀಪು ಅವರ ಶ*ವಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದೆ.
ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ, ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಹೇಳಿಕೆ ನೀಡಿದೆ. “ರ‍್ಯಾಪಿಡ್ ಆಕ್ಷನ್ ಬೆಟಾಲಿಯನ್ (RAB) ವಿವಿಧೆಡೆ ಕಾರ್ಯಾಚರಣೆ ನಡೆಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 19 ರಿಂದ 46 ವರ್ಷ ವಯಸ್ಸಿನ ಏಳು ಶಂಕಿತರನ್ನು ಬಂಧಿಸಿದೆ,” ಎಂದು ತಿಳಿಸಿದೆ. ಪೊಲೀಸರು ದೀಪು ಅವರ ಶವವನ್ನು ವಶಪಡಿಸಿಕೊಂಡು ಮೈಮನ್‌ಸಿಂಗ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಶುಕ್ರವಾರವಷ್ಟೇ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಮಧ್ಯಂತರ ಸರ್ಕಾರ, “ಹೊಸ ಬಾಂಗ್ಲಾದೇಶದಲ್ಲಿ ಇಂತಹ ಹಿಂಸಾಚಾರಕ್ಕೆ ಮತ್ತು ಕೋಮು ದ್ವೇಷಕ್ಕೆ ಜಾಗವಿಲ್ಲ. ಈ ಹೀನ ಕೃತ್ಯ ಎಸಗಿದ ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ” ಎಂದು ಎಚ್ಚರಿಸಿತ್ತು.
ಕಳೆದ ವರ್ಷದ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದು, ಈ ಘಟನೆ ಮತ್ತಷ್ಟು ಆತಂಕ ಮೂಡಿಸಿದೆ.






