ಬೆಂಗಳೂರು: ನಗರದ ಪ್ರತಿ ಪೊಲೀಸ್ ಠಾಣೆಯಲ್ಲಿ ಸಕ್ರಿಯವಾಗಿರುವ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ (SMMC) ಸಿಬ್ಬಂದಿ ಸಮಯಪ್ರಜ್ಞೆಯಿಂದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರನ್ನು ಬಳಸಿಕೊಂಡು ಸಾರ್ವಜನಿಕರನ್ನು ವಂಚಿಸಲು ಯತ್ನಿಸುತ್ತಿದ್ದ ಜಾಲವೊಂದು ಬಯಲಿಗೆ ಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಗಮನಿಸುತ್ತಿದ್ದ ಪೊಲೀಸರಿಗೆ ಹಣಕಾಸಿನ ಹೂಡಿಕೆಗೆ ಸಂಬಂಧಿಸಿದ ಸಂಶಯಾಸ್ಪದ ಲಿಂಕ್‌ವೊಂದು ಪತ್ತೆಯಾಗಿತ್ತು. ಈ ವಿಡಿಯೋದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಹಣ ಹೂಡಿಕೆ ಮಾಡುವ ಬಗ್ಗೆ ಮಾಹಿತಿ ನೀಡುವಂತೆ ಬಿಂಬಿಸಲಾಗಿತ್ತು. ಅನುಮಾನಗೊಂಡ ಪೊಲೀಸರು Deep Fake Analysis ಮಾಡಿಸಿದಾಗ, ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಕ ಸೃಷ್ಟಿಸಿದ ನಕಲಿ ವಿಡಿಯೋ ಎಂದು ಸಾಬೀತಾಗಿದೆ.
ಫೇಸ್‌ಬುಕ್‌ನಲ್ಲಿ “Dune Dream” ಎಂಬ ಅಕೌಂಟ್ ಮೂಲಕ ಈ ವಿಡಿಯೋ ಹಂಚಿಕೊಳ್ಳಲಾಗಿತ್ತು. ಮನೆಯಲ್ಲೇ ಕೂತು ಹಣ ಹೂಡಿಕೆ ಮಾಡಿ ಲಾಭ ಗಳಿಸಿ ಎಂಬ ಆಮಿಷ ಒಡ್ಡಿ ಫೇಕ್ ಲಿಂಕ್‌ಗಳ ಮೂಲಕ ಜನರ ಹಣ ಲೂಟಿ ಮಾಡಲು ವಂಚಕರು ಸಂಚು ರೂಪಿಸಿದ್ದರು.
ಪ್ರಕರಣದ ಗಂಭೀರತೆ ಅರಿತ ಪೊಲೀಸರು ಕೂಡಲೇ ಆ ವಿಡಿಯೋ ಲಿಂಕ್‌ಗಳನ್ನು ನಗರ ಕಮಿಷನರ್ ಕಚೇರಿಯ ಸೈಬರ್ ಸೆಲ್‌ಗೆ ಕಳುಹಿಸಿ ಡಿಲೀಟ್ ಮಾಡಿಸಿದ್ದಾರೆ. ಸದ್ಯ ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೀಪ್ ಫೇಕ್ ವಿಡಿಯೋ ಹರಿಬಿಟ್ಟ ಕಿಲಾಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.






