ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಕೆ.ಆರ್. ಪುರಂ ಶಾಸಕ ಭೈರತಿ ಬಸವರಾಜ್ (Byrathi Basavaraj) ಅವರಿಗೆ ಸಂಕಷ್ಟ ಎದುರಾಗಿದೆ. ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಎಚ್ಚೆತ್ತಿರುವ ಸಿಐಡಿ (CID) ಅಧಿಕಾರಿಗಳು, ಶಾಸಕರ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ (FIR)ರದ್ದು ಕೋರಿ ಮತ್ತು ನಿರೀಕ್ಷಣಾ ಜಾಮೀನು ಕೋರಿ ಭೈರತಿ ಬಸವರಾಜ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಈ ಆದೇಶ ಹೊರಬೀಳುತ್ತಿದ್ದಂತೆ ಸಿಐಡಿ ತಂಡ ಅಲರ್ಟ್ ಆಗಿದ್ದು, ಬೈರತಿ ಬಸವರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ.
ಬೈರತಿ ಬಸವರಾಜ್ ಅವರ ಮನೆ, ಕಚೇರಿ ಹಾಗೂ ಅವರ ಆಪ್ತರು ಮತ್ತು ಸಂಬಂಧಿಕರ ಮನೆಗಳ ಮೇಲೆ ಸಿಐಡಿ (CID) ತಂಡಗಳು ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿವೆ. ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ಎಂಬಾತನ ವಿಚಾರಣೆ ವೇಳೆ ಶಾಸಕ ಭೈರತಿ ಬಸವರಾಜ್ ಅವರ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ. ಈ ಆಧಾರದ ಮೇಲೆ ಸಿಐಡಿ ಶಾಸಕರನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿದೆ.
ಯಾವುದೇ ಕ್ಷಣದಲ್ಲಿ ಭೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ಬಂಧಿಸುವ ಸಾಧ್ಯತೆಯಿದ್ದು, ಶಾಸಕರು ಸದ್ಯ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.






