ಬೆಂಗಳೂರು: ರಾಜ್ಯದಲ್ಲಿ ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ (Cancer )ಹರಡುತ್ತದೆ ಎಂಬ ವದಂತಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಸುದ್ದಿಯ ನೇರ ಪರಿಣಾಮ ಈಗ ಬೇಕರಿ ಮತ್ತು ಕಾಂಡಿಮೆಂಟ್ಸ್ ವ್ಯಾಪಾರದ ಮೇಲೆ ಉಂಟಾಗಿದ್ದು, ವಿಶೇಷವಾಗಿ ಮೊಟ್ಟೆ ಬಳಸಿ ತಯಾರಿಸುವ ಆಹಾರ ಪದಾರ್ಥಗಳ ಮಾರಾಟ ಗಣನೀಯವಾಗಿ ಕುಸಿದಿದೆ.
ಸೀಸನ್‌ನಲ್ಲೇ ವ್ಯಾಪಾರಕ್ಕೆ ಹೊಡೆತ:
ಎಗ್ ಪಫ್ ಮತ್ತು ಕೇಕ್‌ಗಳ ಮಾರಾಟದಲ್ಲಿ ಶೇ. 10 ರಿಂದ 15ರಷ್ಟು ಕುಸಿತ ಕಂಡುಬಂದಿದೆ. ಮೊಟ್ಟೆ ಬಳಸುತ್ತಾರೆ ಎಂಬ ಕಾರಣಕ್ಕೆ ಜನರು ಕೇಕ್ ಖರೀದಿಸಲು ಹಿಂಜರಿಯುತ್ತಿದ್ದಾರೆ. ಕ್ರಿಸ್‌ಮಸ್ (Christmas) ಮತ್ತು ನ್ಯೂ ಇಯರ್ ಸಮೀಪಿಸುತ್ತಿದ್ದರೂ, ಹಲವು ಬೇಕರಿಗಳಿಗೆ ಇನ್ನೂ ಕೇಕ್ ಆರ್ಡರ್‌ಗಳು ಬಂದಿಲ್ಲ. ಇದರಿಂದಾಗಿ ವ್ಯಾಪಾರಸ್ಥರು ಈ ಬಾರಿ ಕೇಕ್ ತಯಾರಿಸಲು ಹಿಂದೇಟು ಹಾಕುತ್ತಿದ್ದಾರೆ.
ಮೊಟ್ಟೆಯಿಂದ ಯಾವುದೇ ಅಪಾಯವಿಲ್ಲ ಎಂದು ರಾಜ್ಯ ಸರ್ಕಾರ ಸದನದಲ್ಲೇ ಸ್ಪಷ್ಟನೆ ನೀಡಿದೆ. ಆದರೂ ಜನರ ಮನಸ್ಸಿನಲ್ಲಿರುವ ಆತಂಕ ಮಾತ್ರ ದೂರವಾಗಿಲ್ಲ.
ಸದ್ಯ ರಾಜ್ಯಾದ್ಯಂತ ಮೊಟ್ಟೆಗಳ ಸ್ಯಾಂಪಲ್ ಪಡೆಯಲಾಗಿದ್ದು, ಸುರಕ್ಷತೆಯ ಪರೀಕ್ಷಾ ವರದಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. “ವರದಿ ಬರುವವರೆಗೂ ಈ ಗೊಂದಲ ನಿಲ್ಲುವುದಿಲ್ಲ, ಇದರಿಂದ ನಮಗೆ ದೊಡ್ಡ ನಷ್ಟವಾಗುತ್ತಿದೆ” ಎಂದು ಬೇಕರಿ (Bakery) ಮಾಲೀಕರು ಅಳಲು ತೋಡಿಕೊಂಡಿದ್ದಾರೆ.






