ಬೆಂಗಳೂರು: ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗಳ ಆಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸುರಕ್ಷತಾ ಮಾನದಂಡಗಳ ಪಾಲನೆ ವಿಚಾರವಾಗಿ ಕಬ್ಬನ್ ಪಾರ್ಕ್ ಪೊಲೀಸರು ರಾಜ್ಯ ಕ್ರಿಕೆಟ್ ಮಂಡಳಿಗೆ (KSCA) ಕಡಕ್ ನೋಟಿಸ್ ಜಾರಿ ಮಾಡಿದ್ದಾರೆ.
ಪೊಲೀಸ್ ಇಲಾಖೆ ವಿಧಿಸಿರುವ ನಿರ್ದಿಷ್ಟ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಈ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಕ್ರೀಡಾಂಗಣದಲ್ಲಿ ಸುರಕ್ಷತಾ ಕ್ರಮಗಳು ಮತ್ತು ಇಲಾಖೆಯ ನಿಯಮಗಳನ್ನು ಯಥಾವತ್ತಾಗಿ ಪಾಲಿಸಿರುವುದು ಖಚಿತವಾದರೆ ಮಾತ್ರ ಮುಂದಿನ ಪಂದ್ಯಾವಳಿಗಳನ್ನು ನಡೆಸಲು ಅವಕಾಶ ನೀಡಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸುರಕ್ಷತೆ ಮತ್ತು ನಿಯಮಗಳ ಪಾಲನೆ ಕುರಿತಂತೆ ತಜ್ಞರಿಂದ (Experts) ವರದಿಯನ್ನು ಪಡೆಯಲು ನಿರ್ಧರಿಸಲಾಗಿದೆ. ಎಕ್ಸ್‌ಪರ್ಟ್ಸ್ ವರದಿ ಕೈಸೇರಿದ ಬಳಿಕ, ಅದರಲ್ಲಿನ ಅಂಶಗಳನ್ನು ಪರಿಶೀಲಿಸಿ ಮ್ಯಾಚ್ ನಡೆಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೀಗಾಗಿ, ಕೆಎಸ್‌ಸಿಎ ಪಾಲಿಗೆ ಮುಂದಿನ ದಿನಗಳು ನಿರ್ಣಾಯಕವಾಗಿದ್ದು, ತಜ್ಞರ ವರದಿ ಏನಾಗಲಿದೆ ಎಂಬ ಕುತೂಹಲ ಮೂಡಿದೆ.






