ನಾಗಮಂಗಲ: ಮಾಂತ್ರಿಕ ಶಕ್ತಿಯಿರುವ “ರಾಮ-ಲಕ್ಷ್ಮಣ” (Rama-Lakshmana) ನಾಣ್ಯವೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಲು ಯತ್ನಿಸಿದ ಇಬ್ಬರು ಯುವಕರನ್ನು ನಾಗಮಂಗಲದಲ್ಲಿ ಸಾರ್ವಜನಿಕರು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪಟ್ಟಣದ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದ ಬಳಿ ಈ ಹೈಡ್ರಾಮಾ ನಡೆದಿದೆ.
ನಾಗಮಂಗಲ ತಾಲ್ಲೂಕಿನ ಶಿಕಾರಿಪುರ ಗ್ರಾಮದ ಯಶ್ವಂತ್ ರಾವ್ ಮತ್ತು ಸುಧೀರ್ ಎಂಬುವವರು ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರಿನ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದ್ದರು. ತಮ್ಮ ಬಳಿ ಮಾಂತ್ರಿಕ ಶಕ್ತಿಯಿರುವ ಹಳೆಯ ತಾಮ್ರದ ನಾಣ್ಯವಿದ್ದು, ಅದನ್ನು ಪಡೆದರೆ ಅದೃಷ್ಟ ಒಲಿಯುತ್ತದೆ ಎಂದು ನಂಬಿಸಿದ್ದರು.
ಈ ನಾಣ್ಯಕ್ಕಾಗಿ ಬೆಂಗಳೂರಿನ ವ್ಯಕ್ತಿಯಿಂದ 1 ಲಕ್ಷ ರೂಪಾಯಿ ಹಣ ಪಡೆದಿದ್ದರು. ನಾಣ್ಯ ಹಸ್ತಾಂತರಿಸಲು ನಾಗಮಂಗಲಕ್ಕೆ ಬರುವಂತೆ ವ್ಯಕ್ತಿಗೆ ಸೂಚಿಸಿದ್ದರು. ವ್ಯಕ್ತಿ ನಾಗಮಂಗಲಕ್ಕೆ ಬಂದಾಗ, ಯುವಕರು ಸಾಮಾನ್ಯ ತಾಮ್ರದ ನಾಣ್ಯ (copper coin) ನೀಡಿ ಹಣದೊಂದಿಗೆ ಪರಾರಿಯಾಗಲು ಯತ್ನಿಸಿದ್ದಾರೆ. ತಾನು ವಂಚನೆಗೊಳಗಾಗಿರುವುದು ಅರಿತ ವ್ಯಕ್ತಿ ‘ಕಳ್ಳ ಕಳ್ಳ’ ಎಂದು ಕಿರುಚಾಡಿದ್ದಾರೆ. ಕೂಡಲೇ ಜಮಾಯಿಸಿದ ಸಾರ್ವಜನಿಕರು ಇಬ್ಬರು ಯುವಕರನ್ನು ಹಿಡಿದು ಸರಿಯಾಗಿ ಗೂಸಾ ನೀಡಿದ್ದಾರೆ. ಈ ವೇಳೆ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಆಗಮಿಸಿದ ನಾಗಮಂಗಲ ಟೌನ್ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.






