ಗೋಕರ್ಣ : ರಾಜ್ಯ ರಾಜಕಾರಣದ “ಚಾಣಕ್ಯ” ಡಿ.ಕೆ. ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿಯಾಗಲಿದ್ದಾರೆಯೇ? ಇಂತಹದೊಂದು ಪ್ರಶ್ನೆಗೆ ಈಗ ದೈವಿಕ ಉತ್ತರ ಸಿಕ್ಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಗಣಪತಿ ದೇವಸ್ಥಾನ (Gokarna Mahaganapathi Temple)ದಲ್ಲಿ ಡಿ.ಕೆ. ಶಿವಕುಮಾರ್ ಪರವಾಗಿ ಪೂಜೆ ಸಲ್ಲಿಸುವಾಗ ಮಹಾಗಣಪತಿ ಬಲಗಡೆ ಹೂ ನೀಡುವ ಮೂಲಕ ಶುಭ ಮುನ್ಸೂಚನೆ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ.
ನಿನ್ನೆ ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಆದಷ್ಟು ಬೇಗ ರಾಜ್ಯದ ಮುಖ್ಯಮಂತ್ರಿ ಸ್ಥಾನ ಸಿಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಗಣಪತಿಯ ತಲೆಯ ಮೇಲೆ ಹೂ ಇಟ್ಟು ಪ್ರಾರ್ಥಿಸುವಾಗ, ದೇವರು ಬಲಗಡೆ ಹೂ ನೀಡಿದ್ದಾನೆ. ಹಿಂದೂ ಧರ್ಮದ ನಂಬಿಕೆಯಂತೆ ದೇವರ ಬಲಗಡೆ ಹೂ ಬಿದ್ದರೆ ಅದು ಕಾರ್ಯ ಸಿದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಕೇವಲ ಗೋಕರ್ಣ ಮಾತ್ರವಲ್ಲದೆ, ಕುಮಟಾ ತಾಲ್ಲೂಕಿನ ಆಂದ್ಲೆ ಗ್ರಾಮದ ಜಗದೀಶ್ವರಿ ದೇವಸ್ಥಾನದಲ್ಲೂ ಇದೇ ರೀತಿಯ ಪವಾಡ ನಡೆದಿದೆ. ಐದು ಬಾರಿ ಸಂಕಲ್ಪ ಮಾಡಿ ಬೇಡಿಕೆ ಇಟ್ಟಾಗಲೂ ತಾಯಿ ಜಗದೀಶ್ವರಿ ಸಕಾರಾತ್ಮಕವಾಗಿಯೇ ಮುನ್ಸೂಚನೆ ನೀಡಿದ್ದಾಳೆ ಎನ್ನಲಾಗಿದೆ.
ಒಂದೇ ದಿನ ಜಿಲ್ಲೆಯ ಎರಡು ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಪಟ್ಟಕ್ಕೆ ದೈವಿಕ ಸಮ್ಮತಿ ಸಿಕ್ಕಿರುವುದು ಅವರ ಬೆಂಬಲಿಗರಲ್ಲಿ ಹೊಸ ಉತ್ಸಾಹ ಮೂಡಿಸಿದೆ.






