ಬೆಂಗಳೂರು: ನೈಋತ್ಯ ರೈಲ್ವೆ ವಲಯವು (SWR) ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVB) ಮತ್ತು ಬಾಣಸವಾಡಿ ನಿಲ್ದಾಣಗಳಲ್ಲಿ ಯಾರ್ಡ್ ಸಾಮರ್ಥ್ಯ ಹೆಚ್ಚಿಸಲು ಮತ್ತು ಹೆಚ್ಚುವರಿ ಷಂಟ್ ಸಿಗ್ನಲ್ ಅಳವಡಿಕೆಗಾಗಿ ನಾನ್-ಇಂಟರ್‌ಲಾಕಿಂಗ್ (NI) ಕಾಮಗಾರಿ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರದಲ್ಲಿ ಮುರುಡೇಶ್ವರ ಮತ್ತು ಕಣ್ಣೂರು ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ (Partial Cancellation) ಎಂದು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ.
ವ್ಯತ್ಯಯವಾಗಲಿರುವ ರೈಲುಗಳ ವಿವರ:
ರೈಲು ಸಂಖ್ಯೆ 16586 ಮುರುಡೇಶ್ವರ – ಎಸ್‌ಎಂವಿಬಿ ಎಕ್ಸ್‌ಪ್ರೆಸ್: ದಿನಾಂಕ 03/01/2026 ರಂದು ಪ್ರಯಾಣ ಆರಂಭಿಸಲಿರುವ ಈ ರೈಲು, ಕೆಎಸ್‌ಆರ್ ಬೆಂಗಳೂರು (ಮೆಜೆಸ್ಟಿಕ್) ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVB) ನಡುವೆ ಸಂಚರಿಸುವುದಿಲ್ಲ. ಈ ರೈಲು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿಯೇ ಅಂತ್ಯಗೊಳ್ಳಲಿದೆ.
ರೈಲು ಸಂಖ್ಯೆ 16511 ಎಸ್‌ಎಂವಿಬಿ – ಕಣ್ಣೂರು ಎಕ್ಸ್‌ಪ್ರೆಸ್: ದಿನಾಂಕ 04/01/2026 ರಂದು ಪ್ರಯಾಣ ಬೆಳೆಸಲಿರುವ ಈ ರೈಲು, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬದಲಿಗೆ ಯಶವಂತಪುರ ನಿಲ್ದಾಣದಿಂದ ಹೊರಡಲಿದೆ. ಎಸ್‌ಎಂವಿಬಿ ಮತ್ತು ಯಶವಂತಪುರ ನಡುವಿನ ಸಂಚಾರ ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 16512 ಕಣ್ಣೂರು – ಎಸ್‌ಎಂವಿಬಿ ಎಕ್ಸ್‌ಪ್ರೆಸ್: ದಿನಾಂಕ 03/01/2026 ರಂದು ಪ್ರಯಾಣ ಆರಂಭಿಸುವ ಈ ರೈಲು, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪುವ ಬದಲಿಗೆ ಯಶವಂತಪುರ ನಿಲ್ದಾಣದಲ್ಲಿಯೇ ಅಂತ್ಯಗೊಳ್ಳಲಿದೆ. ಯಶವಂತಪುರ ಮತ್ತು ಎಸ್‌ಎಂವಿಬಿ ನಡುವೆ ಸಂಚಾರ ಇರುವುದಿಲ್ಲ.
ರೈಲು ಸಂಖ್ಯೆ 16585 ಎಸ್‌ಎಂವಿಬಿ – ಮುರುಡೇಶ್ವರ ಎಕ್ಸ್‌ಪ್ರೆಸ್: ದಿನಾಂಕ 04/01/2026 ರಂದು ಹೊರಡಲಿರುವ ಈ ರೈಲು, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬದಲಿಗೆ ಕೆಎಸ್‌ಆರ್ ಬೆಂಗಳೂರು (ಮೆಜೆಸ್ಟಿಕ್) ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ. ಎಸ್‌ಎಂವಿಬಿ ಮತ್ತು ಮೆಜೆಸ್ಟಿಕ್ ನಡುವಿನ ಸಂಚಾರವನ್ನು ರದ್ದುಪಡಿಸಲಾಗಿದೆ.
ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಹಾಗೂ ಅನಾನುಕೂಲತೆಗಾಗಿ ವಿಷಾದಿಸುವುದಾಗಿ ನೈಋತ್ಯ ರೈಲ್ವೆ ತಿಳಿಸಿದೆ.






