ಢಾಕಾ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ದಿನೇ ದಿನೇ ವಿಕೋಪಕ್ಕೆ ಹೋಗುತ್ತಿದ್ದು, ಅರಾಜಕತೆಯ ನಡುವೆ ಮನಕಲಕುವ ಘಟನೆಯೊಂದು ವರದಿಯಾಗಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕನೊಬ್ಬರ ಮನೆಗೆ ಹೊರಗಿನಿಂದ ಬೀಗ ಹಾಕಿ ಬೆಂಕಿ ಹಚ್ಚಿದ ಪರಿಣಾಮ, 7 ವರ್ಷದ ಮುಗ್ಧ ಬಾಲಕಿಯೊಬ್ಬಳು ಸಜೀ*ವ ದಹ*ನವಾಗಿದ್ದಾಳೆ.
ಶನಿವಾರ ಮುಂಜಾನೆ 1 ಗಂಟೆ ಸುಮಾರಿಗೆ ಲಕ್ಷ್ಮೀಪುರ ಸದರ್ ಉಪಜಿಲಾದಲ್ಲಿ ಈ ಘಟನೆ ನಡೆದಿದೆ. ‘ಡೈಲಿ ಸ್ಟಾರ್’ ವರದಿ ಪ್ರಕಾರ, ಭವಾನಿಗಂಜ್ ಒಕ್ಕೂಟದ ಬಿಎನ್‌ಪಿ ಸಹಾಯಕ ಸಂಘಟನಾ ಕಾರ್ಯದರ್ಶಿ ಬೆಲಾಲ್ ಹೊಸೈನ್ ಅವರ ಮನೆಯನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಬೆಲಾಲ್ ಅವರ ಪುತ್ರಿ ಆಯೇಷಾ ಅಖ್ತರ್ (7) ಪ್ರಾ*ಣ ಕಳೆದುಕೊಂಡರೆ, ಅವರ ಇತರ ಇಬ್ಬರು ಪುತ್ರಿಯರಾದ ಸಲ್ಮಾ (16) ಮತ್ತು ಸಮಿಯಾ (14) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾ*ವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸ್ವತಃ ಬೆಲಾಲ್ ಕೂಡ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ.
ಬಾಗಿಲು ಮುರಿದು ಹೊರಬಂದರೂ ಮಗಳನ್ನು ಉಳಿಸಲಾಗಲಿಲ್ಲ!
ಘಟನೆಯ ಬಗ್ಗೆ ಬೆಲಾಲ್ ಅವರ ತಾಯಿ ಕಣ್ಣೀರು ಹಾಕುತ್ತಾ ವಿವರಿಸಿದ್ದಾರೆ. ಮಧ್ಯರಾತ್ರಿ ಎಚ್ಚರವಾದಾಗ ಮಗನ ತಗಡಿನ ಶೀಟ್‌ನ ಮನೆಗೆ ಬೆಂಕಿ ಬಿದ್ದಿರುವುದು ತಿಳಿಯಿತು. ನಾನು ಹೊರಗೆ ಓಡಿ ಹೋದಾಗ, ಮನೆಯ ಬಾಗಿಲು ಹೊರಗಿನಿಂದ ಲಾಕ್ ಆಗಿತ್ತು. ನನ್ನ ಮಗ ಬೆಲಾಲ್ ಕಷ್ಟಪಟ್ಟು ಬಾಗಿಲು ಮುರಿದು ಪತ್ನಿ ಮತ್ತು ನಾಲ್ಕು ತಿಂಗಳ ಹಸುಗೂಸನ್ನು ರಕ್ಷಿಸಿದ. ಆದರೆ ಪಕ್ಕದ ಕೋಣೆಯಲ್ಲಿ ಮಲಗಿದ್ದ ಹೆಣ್ಣುಮಕ್ಕಳನ್ನು ತಕ್ಷಣ ಹೊರಗೆ ಕರೆತರಲು ಸಾಧ್ಯವಾಗಲಿಲ್ಲ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಲಕ್ಷ್ಮೀಪುರ ಸದರ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಈ ಹೇಯ ಕೃತ್ಯ ಎಸಗಿದ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಯುವ ನಾಯಕನ ಸಾವಿನ ನಂತರ ಬಾಂಗ್ಲಾದೇಶದಾದ್ಯಂತ ಭುಗಿಲೆದ್ದಿರುವ ಹಿಂಸಾಚಾರವು ಇದೀಗ ಅಮಾಯಕ ಮಕ್ಕಳ ಪ್ರಾಣವನ್ನೂ ಬ*ಲಿಪಡೆಯುತ್ತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿದೆ.






