ಜಾರ್ಖಂಡ್: ಸಣ್ಣದಾಗಿ ಕೆಮ್ಮು ಕಾಣಿಸಿಕೊಂಡಿದೆ ಎಂದು ಪೋಷಕರು ನೀಡಿದ ಕೆಮ್ಮಿನ ಔಷಧವೇ (Cough Syrup) ಮಗುವಿನ ಪ್ರಾಣಕ್ಕೆ ಮುಳುವಾದ ಧಾರುಣ ಘಟನೆ ಜಾರ್ಖಂಡ್‌ನ ಕೊಡರ್ಮಾ ಜಿಲ್ಲೆಯಲ್ಲಿ ನಡೆದಿದೆ. ಔಷಧ ಸೇವಿಸಿದ ಒಂದೂವರೆ ವರ್ಷದ ಪುಟ್ಟ ಮಗು ಮೃ*ತಪಟ್ಟಿದ್ದು, ಘಟನೆಯ ಬಗ್ಗೆ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ.
ಕೊಡರ್ಮಾ ಪೊಲೀಸ್ ಠಾಣಾ ವ್ಯಾಪ್ತಿಯ ಲೋಕೈ ಭುಯಾನ್ ಟೋಲಾದಲ್ಲಿ ಶನಿವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ. ಮೃ*ತ ಬಾಲಕಿಯನ್ನು ರಾಗಿಣಿ ಕುಮಾರಿ ಎಂದು ಗುರುತಿಸಲಾಗಿದೆ. ಮಗುವಿಗೆ ಕೆಮ್ಮು ಇದ್ದ ಕಾರಣ, ಪೋಷಕರು ತಮ್ಮ ಪ್ರದೇಶದ ಖಾಸಗಿ ಮೆಡಿಕಲ್ ಸ್ಟೋರ್ ಒಂದರಿಂದ ಕೆಮ್ಮಿನ ಔಷಧವನ್ನು ಖರೀದಿಸಿ ಕುಡಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪಿಟಿಐಗೆ ಮಾಹಿತಿ ನೀಡಿರುವ ಕೊಡರ್ಮಾ ಸಿವಿಲ್ ಸರ್ಜನ್ ಅನಿಲ್ ಕುಮಾರ್, ಮಗುವಿನ ಸಾವಿನ ವರದಿ ಆರೋಗ್ಯ ಇಲಾಖೆಗೆ ತಲುಪಿದೆ. ಈ ಬಗ್ಗೆ ಗಂಭೀರ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ವಿಷಯ ತಿಳಿದ ತಕ್ಷಣ ಡ್ರಗ್ ಇನ್ಸ್‌ಪೆಕ್ಟರ್‌ಗೆ (DI) ಮಾಹಿತಿ ರವಾನಿಸಲಾಗಿದ್ದು, ಸೋಮವಾರದಂದು ಖುದ್ದು ಹಾಜರಾಗಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಆ ಔಷಧಿಯಲ್ಲಿ ವಿಷಕಾರಿ ಅಂಶಗಳಿದ್ದವಾ ಅಥವಾ ಅವಧಿ ಮೀರಿದ ಔಷಧ ನೀಡಲಾಗಿತ್ತೇ ಎಂಬುದು ತನಿಖೆಯ ನಂತರವಷ್ಟೇ ಸ್ಪಷ್ಟವಾಗಲಿದೆ.






