ಕಾರವಾರ: ಬಹುನಿರೀಕ್ಷಿತ ‘ಕರಾವಳಿ ಉತ್ಸವ-2025’ರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ಕಾರವಾರ ಕಡಲತೀರ ಮದುವಣಗಿತ್ತಿಯಂತೆ ಶೃಂಗಾರಗೊಂಡು ಕಂಗೊಳಿಸುತ್ತಿದೆ. ಎಂಟು ವರ್ಷಗಳ ಸುದೀರ್ಘ ಅವಧಿಯ ನಂತರ ನಡೆಯುತ್ತಿರುವ ಈ ಸಾಂಸ್ಕೃತಿಕ ಜಾತ್ರೆಗೆ ಜಿಲ್ಲಾಡಳಿತ ಭರ್ಜರಿ ತಯಾರಿ ನಡೆಸಿದೆ.
ಮೈಸೂರು ಯುವ ದಸರಾ ಮಾದರಿಯಲ್ಲಿ ಬೃಹತ್ ವೇದಿಕೆ ಹಾಗೂ ಲೈಟಿಂಗ್ ವ್ಯವಸ್ಥೆಯನ್ನು ಶನಿವಾರ ರಾತ್ರಿಯೇ ಸಜ್ಜುಗೊಳಿಸಲಾಗಿದೆ. ಸರ್ಕಾರಿ ಕಚೇರಿಗಳ ಗೋಡೆಗಳು ಸಂಸ್ಕೃತಿ, ಪರಿಸರ ಜಾಗೃತಿ ಸಾರುವ ವರ್ಣರಂಜಿತ ಚಿತ್ರಗಳಿಂದ ಅಲಂಕೃತಗೊಂಡಿವೆ. ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ, ಏಳು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಗಾಯಕರಿಂದ ಕಡಲತೀರದಲ್ಲಿ ಸಂಗೀತದ ಅಲೆ ಏಳಲಿದೆ. ಉತ್ಸವದ ಮೂಲಕ ಕಾರವಾರ ಹಾಗೂ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಹೊಸ ಚೈತನ್ಯ ಪಡೆದುಕೊಂಡಿದೆ.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಭಾನುವಾರ ಮಾಹಿತಿ ನೀಡಿ, ಡಿಸೆಂಬರ್ 22 ರಂದು ಮಧ್ಯಾಹ್ನ 4 ಗಂಟೆಗೆ ಸುಭಾಷ್ ವೃತ್ತದಿಂದ ಮಯೂರ ವರ್ಮ ವೇದಿಕೆಯವರೆಗೆ 14 ಕಲಾ ತಂಡಗಳ ಅದ್ದೂರಿ ಮೆರವಣಿಗೆ ಮೂಲಕ ಉತ್ಸವಕ್ಕೆ ಚಾಲನೆ ಸಿಗಲಿದೆ ಎಂದು ತಿಳಿಸಿದರು. ಕಾರವಾರದ ಬೀದಿಗಳು ಉತ್ಸವಕ್ಕಾಗಿ ಸಿಂಗಾರಗೊಂಡಿದ್ದು, ಜಿಲ್ಲೆಯ ಯುವಜನತೆ ಉತ್ಸವಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಪಕ್ಕದ ಗೋವಾ ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಂದಲೂ ಜನರು ಆಗಮಿಸುತ್ತಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಆಗಮಿಸಲಿದ್ದಾರೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ, ಶಾಸಕರಾದ ಸತೀಶ್ ಸೈಲ್ ಮತ್ತು ಭೀಮಣ್ಣ ನಾಯ್ಕ್ ಉಪಸ್ಥಿತರಿರಲಿದ್ದಾರೆ. ಉತ್ಸವದ ಮೊದಲ ದಿನವೇ ಖ್ಯಾತ ಗಾಯಕ ಶಂಕರ್ ಮಹಾದೇವನ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಪ್ರೇಕ್ಷಕರಿಗೆ ರಸದೌತಣ ನೀಡಲಿದೆ.






