ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಕಠಿಣ ಚಳಿಗಾಲದ ಅವಧಿ ಎಂದೇ ಕರೆಯಲ್ಪಡುವ 40 ದಿನಗಳ ‘ಚಿಲ್ಲೈ-ಕಲಾನ್’ (Chillai-Kalan) ಭಾನುವಾರದಿಂದ ಆರಂಭವಾಗಿದ್ದು, ಇದರ ಬೆನ್ನಲ್ಲೇ ಕಣಿವೆಯಾದ್ಯಂತ ಭಾರಿ ಹಿಮಪಾತ ಮತ್ತು ಮಳೆಯಾಗಿದೆ. ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ಸಾಧ್ನಾ ಟಾಪ್ ಸೇರಿದಂತೆ ಹಲವು ಪ್ರವಾಸಿ ತಾಣಗಳು ಶ್ವೇತವರ್ಣದ ಹಿಮದ ಹೊದಿಕೆಯನ್ನು ಹೊದ್ದುಕೊಂಡಿವೆ.
ಶ್ರೀನಗರ ಸೇರಿದಂತೆ ಕಣಿವೆಯ ಬಯಲು ಪ್ರದೇಶಗಳಲ್ಲಿ ರಾತ್ರಿಯಿಡೀ ಸಾಧಾರಣ ಮಳೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಸೋನಾಮಾರ್ಗ್‌ನಲ್ಲಿ ಸುರಿಯುತ್ತಿರುವ ಹಿಮವನ್ನು ಕಂಡು ಪ್ರವಾಸಿಗರು ಸಂಭ್ರಮಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಇಡೀ ಪ್ರದೇಶವೇ ಹಿಮದ ರಾಶಿಯಿಂದ ಆವೃತವಾಗಿದ್ದು, ಪ್ರವಾಸಿಗರಿಗೆ ಸ್ವರ್ಗದ ಅನುಭವ ನೀಡುತ್ತಿದೆ.
ರಸ್ತೆ ಬಂದ್, ಪ್ರಯಾಣಿಕರಿಗೆ ಎಚ್ಚರಿಕೆ
ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭಾರಿ ಹಿಮಪಾತದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 86 ಕಿ.ಮೀ ಉದ್ದದ ಗುರೇಜ್-ಬಂಡಿಪೋರಾ ರಸ್ತೆಯನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಇದೇ ವೇಳೆ, ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ. ಬಂಡಿಪೋರಾ ರಸ್ತೆಗಳು ನಿರ್ಜನವಾಗಿದ್ದು, ಮನೆಗಳ ಮೇಲೆ ಹಿಮದ ರಾಶಿ ಆವರಿಸಿದೆ. ಇತ್ತ ಲಡಾಖ್‌ನ ಲೇಹ್ ನಗರ ಕೂಡ ಹಿಮದಲ್ಲಿ ಮುಳುಗಿದ್ದು, ರಸ್ತೆಗಳು, ಕಟ್ಟಡಗಳ ಮೇಲ್ಛಾವಣಿ ಮತ್ತು ಪರ್ವತಗಳು ಹಿಮದ ಪದರದಡಿ ಮಾಯವಾಗಿವೆ.
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ಕಣಿವೆಯಲ್ಲಿ ಹಿಮಪಾತ ಮತ್ತು ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ದೀರ್ಘಕಾಲದ ಒಣಹವೆಯಿಂದ ಕಂಗೆಟ್ಟಿದ್ದ ಕಾಶ್ಮೀರಿಗರಿಗೆ ಈ ಹಿಮಪಾತವು ನೆಮ್ಮದಿ ತಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, “ಭಾರಿ ಹಿಮಪಾತವನ್ನು ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಹಿಮದಿಂದ ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ, ನಾವು ಇದಕ್ಕಾಗಿ ಕಾಯುತ್ತಿದ್ದೆವು ಮತ್ತು ಯಾರಿಗೂ ದೂರು ಇರಲಾರದು,” ಎಂದು ಹೇಳಿದ್ದಾರೆ.
ಏನಿದು ‘ಚಿಲ್ಲೈ-ಕಲಾನ್’?
ಕಾಶ್ಮೀರದಲ್ಲಿ ಡಿಸೆಂಬರ್ 21 ರಿಂದ ಜನವರಿ 30 ರವರೆಗಿನ 40 ದಿನಗಳ ಅವಧಿಯನ್ನು ‘ಚಿಲ್ಲೈ-ಕಲಾನ್’ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಕಠಿಣ ಚಳಿಗಾಲದ ಸಮಯವಾಗಿದ್ದು, ಈ ಸಮಯದಲ್ಲಿ ಅತಿ ಹೆಚ್ಚು ಹಿಮಪಾತವಾಗುತ್ತದೆ. ಇದಾದ ಬಳಿಕ 20 ದಿನಗಳ ‘ಚಿಲ್ಲೈ-ಖುರ್ದ್’ (ಸಣ್ಣ ಚಳಿ) ಮತ್ತು 10 ದಿನಗಳ ‘ಚಿಲ್ಲೈ-ಬಚ್ಚಾ’ (ಮಗು ಚಳಿ) ಅವಧಿಗಳು ಪ್ರಾರಂಭವಾಗಲಿವೆ.






