ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಮದನ್ ಮಿತ್ರಾ ಅವರು ಶ್ರೀರಾಮಚಂದ್ರನ ಕುರಿತು ನೀಡಿರುವ ಹೇಳಿಕೆ ಇದೀಗ ಹೊಸ ವಿವಾದದ ಕಿಡಿ ಹೊತ್ತಿಸಿದೆ. “ಶ್ರೀರಾಮ ಹಿಂದೂ ಅಲ್ಲ, ಆತ ಮುಸ್ಲಿಂ” ಎಂದು ಹೇಳುವ ಮೂಲಕ ಅವರು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ.
ಬಿಜೆಪಿ ನಾಯಕರಿಗೆ ಬಹಿರಂಗ ಸವಾಲು ಹಾಕಿರುವ ಮದನ್ ಮಿತ್ರಾ, “ರಾಮನನ್ನು ಹಿಂದೂ ಎಂದು ಕರೆಯುವ ಮೊದಲು ಅದನ್ನು ಸಾಬೀತು ಮಾಡಿ. ಆತನ ‘ಸರ್ ನೇಮ್’ ಏನು ಎಂಬುದನ್ನು ಮೊದಲು ಹೇಳಿ, ಆನಂತರ ಮಾತನಾಡಿ” ಎಂದು ಪ್ರಶ್ನಿಸಿದ್ದಾರೆ. ಈ ಹೇಳಿಕೆಯು ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು ಶಾಸಕ ಮದನ್ ಮಿತ್ರಾ ಅವರ ಈ ಹೇಳಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಮಿತ್ರಾ, ರಾಮನ ಕುಲನಾಮದ ಬಗ್ಗೆ ವ್ಯಂಗ್ಯವಾಡುತ್ತಾ, “ಶ್ರೀರಾಮನ ಸರ್ ನೇಮ್ ಬಹುಶಃ ‘ಜೇಠ್ಮಲಾನಿ’ ಇರಬಹುದು” ಎಂದು ಲೇವಡಿ ಮಾಡಿದ್ದಾರೆ.
ಈ ಹೇಳಿಕೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿರುವ ಬಿಜೆಪಿ, ಟಿಎಂಸಿ ನಾಯಕನ ವಿರುದ್ಧ ಹರಿಹಾಯ್ದಿದೆ. ರಾಮಮಂದಿರ ಉದ್ಘಾಟನೆಯ ಸಂಭ್ರಮದ ನಡುವೆಯೇ ಟಿಎಂಸಿ ಶಾಸಕರು ಶ್ರೀರಾಮನ ಅಸ್ಮಿತೆಯನ್ನೇ ಪ್ರಶ್ನಿಸಿರುವುದು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ವಾಕ್ಸಮರಕ್ಕೆ ನಾಂದಿ ಹಾಡಿದೆ.






