ಉತ್ತರಕನ್ನಡ: ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗವಿನಗುಡ್ಡದ ಅಡಿಕೆ ತೋಟದಲ್ಲಿ ಕಾಲು ಮುರಿದುಕೊಂಡು ಬಿದ್ದಿದ್ದ ಕಾಡುಕೋಣವೊಂದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟ ಧಾರುಣ ಘಟನೆ ನಡೆದಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯ ಮತ್ತು ತಜ್ಞ ವೈದ್ಯರ ಕೊರತೆಯೇ ಈ ಮೂಕ ಪ್ರಾಣಿಯ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಕಳೆದವಾರ ಗವಿನಗುಡ್ಡದ ಅಡಿಕೆ ತೋಟಕ್ಕೆ ಬಂದಿದ್ದ ಕಾಡುಕೋಣವೊಂದು ಆಕಸ್ಮಿಕವಾಗಿ ಬಿದ್ದು ತನ್ನ ಮುಂದಿನ ಬಲಗಾಲನ್ನು ಮುರಿದುಕೊಂಡಿತ್ತು. ಕಾಲು ಮುರಿದ ಯಾತನೆಯಲ್ಲಿ, ಆಹಾರವನ್ನೂ ಸೇವಿಸದೇ, ಅಲ್ಲಿಂದ ಕದಲಲಾಗದೇ ನರಳಾಡುತ್ತಿತ್ತು. ಆದರೆ, ಈ ಪ್ರಾಣಿಯ ರಕ್ಷಣೆ ಮತ್ತು ಚಿಕಿತ್ಸೆಯ ಜವಾಬ್ದಾರಿ ಹೊರಬೇಕಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಇಂದು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಸಬೂಬು ಹೇಳುತ್ತಾ ಕಾಲಹರಣ ಮಾಡಿದರು ಎಂಬುದು ಸ್ಥಳೀಯರ ಆರೋಪ. ಅಂತಿಮವಾಗಿ ಮೂರು ದಿನಗಳ ನಂತರ ವೈದ್ಯರು ಸ್ಥಳಕ್ಕೆ ಆಗಮಿಸಿದ್ದರು.
ಗವಿನಗುಡ್ಡದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ, ಅಧಿಕಾರಿಗಳು ಅದನ್ನು ಶಿವಮೊಗ್ಗದ ಮೃಗಾಲಯಕ್ಕೆ ಸ್ಥಳಾಂತರಿಸಲು ನಿರ್ಧರಿಸಿದರು. ಇದಕ್ಕಾಗಿ ತಜ್ಞರ ಮೂಲಕ ಕಾಡುಕೋಣಕ್ಕೆ ಅರವಳಿಕೆ ನೀಡಲಾಯಿತು. ಆದರೆ, ಲಭ್ಯ ಮಾಹಿತಿ ಪ್ರಕಾರ, ಅರವಳಿಕೆ ಮದ್ದಿನ ಪರಿಣಾಮದಿಂದ ಪ್ರಜ್ಞೆ ಕಳೆದುಕೊಂಡ ಕಾಡುಕೋಣ, ಶಿವಮೊಗ್ಗಕ್ಕೆ ತಲುಪಿದರೂ ಪ್ರಜ್ಞೆ ಮರಳಿ ಪಡೆಯಲೇ ಇಲ್ಲ. ಸಾಗಾಟದ ಸಮಯದಲ್ಲಿ ಉಂಟಾದ ಒತ್ತಡ, ಆಕ್ಸಿಜನ್ ಕೊರತೆ ಮತ್ತು ಆತಂಕದಿಂದ ಹೃದಯ ಸ್ತಂಭನವಾಗಿ ಮೃತಪಟ್ಟಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ.






