ನವದೆಹಲಿ: ಸೋಮವಾರ ಬೆಳಿಗ್ಗೆ ದೆಹಲಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ (AI887) ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಟೇಕಾಫ್ ಆದ ಸುಮಾರು ಒಂದು ಗಂಟೆಯ ಬಳಿಕ ವಿಮಾನವು ಮತ್ತೆ ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ. ವಿಮಾನದ ಇಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಪೈಲಟ್‌ಗಳು ತುರ್ತು ನಿರ್ಧಾರ ತೆಗೆದುಕೊಂಡಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಏನಿದು ಘಟನೆ?
ಈ ಬೋಯಿಂಗ್ 777 ವಿಮಾನದಲ್ಲಿ ಸುಮಾರು 355 ಪ್ರಯಾಣಿಕರಿದ್ದರು. ವಿಮಾನ ಟೇಕಾಫ್ ಆಗಿ ಫ್ಲಾಪ್‌ಗಳನ್ನು ಹಿಂದಕ್ಕೆ ಪಡೆಯುವಾಗ (Flap retraction), ಬಲಬದಿಯ ಇಂಜಿನ್‌ನಲ್ಲಿ (ಇಂಜಿನ್ ನಂ. 2) ಆಯಿಲ್ ಪ್ರೆಶರ್ (ತೈಲ ಒತ್ತಡ) ಕಡಿಮೆಯಾಗುತ್ತಿರುವುದನ್ನು ಪೈಲಟ್‌ಗಳು ಗಮನಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಆಯಿಲ್ ಪ್ರೆಶರ್ ಶೂನ್ಯಕ್ಕೆ ಕುಸಿದಿದೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ, ಸುರಕ್ಷತಾ ನಿಯಮಗಳ ಪ್ರಕಾರ ಆ ಇಂಜಿನ್ ಅನ್ನು ಸ್ಥಗಿತಗೊಳಿಸಿ (Shut down) ದೆಹಲಿಗೆ ವಾಪಸ್ ಬಂದು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತಿಳಿಸಿದೆ.
ತನಿಖೆಗೆ ಆದೇಶಿಸಿದ ಸಚಿವಾಲಯ: ಘಟನೆ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಗಂಭೀರವಾಗಿ ಪರಿಗಣಿಸಿದ್ದು, ಏರ್ ಇಂಡಿಯಾದಿಂದ ಸಮಗ್ರ ವರದಿ ಕೇಳಿದೆ. ಅಲ್ಲದೆ, ಡಿಜಿಸಿಎ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸೂಚಿಸಿದೆ. ಏರ್ ಇಂಡಿಯಾದ ಕಾಯಂ ತನಿಖಾ ಮಂಡಳಿಯು ಡಿಜಿಸಿಎ ಮೇಲ್ವಿಚಾರಣೆಯಲ್ಲಿ ಈ ತನಿಖೆ ನಡೆಸಲಿದೆ.
ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ: ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಏರ್ ಇಂಡಿಯಾ ವಕ್ತಾರರು, “ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ದೆಹಲಿಯಲ್ಲಿ ಇಳಿದ ಎಲ್ಲಾ ಪ್ರಯಾಣಿಕರಿಗೆ ನಮ್ಮ ಸಿಬ್ಬಂದಿ ನೆರವಾಗಿದ್ದು, ಅವರಿಗೆ ಮುಂಬೈಗೆ ತೆರಳಲು ಬೇರೆ ವಿಮಾನದ ವ್ಯವಸ್ಥೆ ಮಾಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.






