ಬೆಂಗಳೂರು: ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ನಾಳೆಯಿಂದ ಮುಂದಿನ ಕೆಲವು ದಿನಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಮುಖವಾಗಿ ನಗರದ ಐಟಿ ಹಬ್‌ಗಳು ಸೇರಿದಂತೆ ಹಲವು ಜನನಿಬಿಡ ಪ್ರದೇಶಗಳಲ್ಲಿ ನಾಳೆಯಿಂದ ಜನವರಿ 11ರ ವರೆಗೆ ವಿದ್ಯುತ್ ಕಡಿತವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ವ್ಯತ್ಯಯ ಇರಲಿದ್ದು, ಸಾರ್ವಜನಿಕರು ಹಾಗೂ ಉದ್ಯೋಗಿಗಳು ಇದಕ್ಕೆ ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
ವಿದ್ಯುತ್ ವ್ಯತ್ಯಯವಾಗಲಿರುವ ಪ್ರಮುಖ ಪ್ರದೇಶಗಳು:
ನಿರ್ವಹಣಾ ಕೆಲಸಗಳು ನಡೆಯುವ ಹಿನ್ನೆಲೆಯಲ್ಲಿ ರಾಗಿಹಳ್ಳಿ, ಸಿದ್ದಾಪುರ ಗೇಟ್ ಹಾಗೂ ಇಪಿಐಪಿ (EPIP) ಲೇಔಟ್ ವ್ಯಾಪ್ತಿಯಲ್ಲಿ ಪವರ್ ಕಟ್ ಇರಲಿದೆ. ಅಲ್ಲದೆ, ಪ್ರಮುಖ ಟೆಕ್ ಪಾರ್ಕ್‌ಗಳಾದ ಟಿಸಿಎಸ್ ಸಾಫ್ಟ್ ವೇರ್ (TCS Software), ಬುಷ್ರಾ ಟೆಕ್ ಪಾರ್ಕ್, ಗೋಪಾಲನ್ ಎಂಟರ್ ಪ್ರೈಸೆಸ್, ಬಾಗ್ಮನೆ ನೀಯಾನ್ ಬ್ಲಾಕ್ ಹಾಗೂ ಓರಿಯೆಂಟಲ್ ಹೊಟೇಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ವಿಶೇಷವಾಗಿ ಇಪಿಐಪಿ ಇಂಡಸ್ಟ್ರಿಯಲ್ ಏರಿಯಾದ ಹಲವೆಡೆ ಈ ವಿದ್ಯುತ್ ಕಡಿತದ ಬಿಸಿ ತಟ್ಟಲಿದೆ. ಕಾಮಗಾರಿ ಪೂರ್ಣಗೊಂಡ ತಕ್ಷಣ ವಿದ್ಯುತ್ ಸಂಪರ್ಕವನ್ನು ಪುನಃ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಈ ಭಾಗದ ನಿವಾಸಿಗಳು ಮತ್ತು ಕಚೇರಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು.






