ದೊಡ್ಡಬಳ್ಳಾಪುರ: ಅ*ನೈತಿಕ ಸಂಬಂಧಕ್ಕೆ (Illicit Relationship) ಗುಡ್ ಬೈ ಹೇಳಿದ ಯುವಕನೊಬ್ಬನ ಮೇಲೆ ಮಹಿಳೆಯೇ ಗ್ಯಾಂಗ್ ಕಟ್ಟಿಕೊಂಡು ಬಂದು ಮಾರಣಾಂತಿಕ ಹಲ್ಲೆ ನಡೆಸಿರುವ ಬೆಚ್ಚಿಬೀಳಿಸುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ನಡೆದಿದೆ. ಸಿನಿಮೀಯ ರೀತಿಯಲ್ಲಿ ನಡೆದ ಈ ದಾಳಿಯಿಂದ ಯುವಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಯ ಹಿನ್ನೆಲೆ: ಕಾರ್ತಿಕ್ ಎಂಬ ಯುವಕ ದೀಪಾ ಎಂಬಾಕೆಯೊಂದಿಗೆ ಅ*ನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಆದರೆ ಮನೆಯವರ ಬುದ್ಧಿವಾದ ಮತ್ತು ಭವಿಷ್ಯದ ದೃಷ್ಟಿಯಿಂದ ಕಾರ್ತಿಕ್, ಆಕೆಯ ಸಹವಾಸವನ್ನು ಸಂಪೂರ್ಣವಾಗಿ ಬಿಡಲು ನಿರ್ಧರಿಸಿದ್ದನು. ಪ್ರಿಯಕರ ತನ್ನಿಂದ ದೂರಾಗುತ್ತಿರುವುದನ್ನು ಸಹಿಸದ ದೀಪಾ, ಸೇಡು ತೀರಿಸಿಕೊಳ್ಳಲು ನಿರ್ಧರಿಸಿ ತನ್ನ ಸಹಚರರೊಂದಿಗೆ ಸಂಚು ರೂಪಿಸಿದ್ದಾಳೆ.
ಡಿಸೆಂಬರ್ 13ರ ಸಂಜೆ ಕಾರ್ತಿಕ್ ಅಂಗಡಿಯೊಂದರ ಬಳಿ ನಿಂತಿದ್ದಾಗ, ಕಾರಿನಲ್ಲಿ ಗ್ಯಾಂಗ್ ಸಮೇತ ಆಗಮಿಸಿದ ದೀಪಾ ಏಕಾಏಕಿ ದಾಳಿ ಮಾಡಿಸಿದ್ದಾಳೆ. ಆಕೆಯ ಸಹಚರರು ಲಾಂಗ್ ಹಾಗೂ ಮಚ್ಚುಗಳಿಂದ ಕಾರ್ತಿಕ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ದೀಪಾ ಕಾರಿನಲ್ಲೇ ಕುಳಿತು ಕೃತ್ಯವನ್ನು ವೀಕ್ಷಿಸುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪಟ್ಟಣದ ಜನನಿಬಿಡ ಪ್ರದೇಶದಲ್ಲಿ ದಾಳಿ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಎಚ್ಚೆತ್ತುಕೊಂಡು ಗ್ಯಾಂಗ್ ವಿರುದ್ಧ ತಿರುಗಿಬಿದ್ದಿದ್ದಾರೆ. ಜನರ ಆಕ್ರೋಶಕ್ಕೆ ಬೆದರಿದ ದೀಪಾ ಮತ್ತು ಆಕೆಯ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಕಾರ್ತಿಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ದೀಪಾ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಇತರರಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.






