ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಸಿದ್ದರಾಮಯ್ಯ (Siddaramaiah) ಬಣದಿಂದ ಈಗ ಹೊಸ ಸ್ಟ್ರಾಟಜಿ ಶುರುವಾಗಿದೆ. ಡಿ.ಕೆ. ಶಿವಕುಮಾರ್ ಅವರಿಗೆ ಪೈಪೋಟಿ ನೀಡಲು ಮತ್ತು ಹೈಕಮಾಂಡ್ ವಿಶ್ವಾಸ ಗಳಿಸಲು ಡಾ. ಜಿ. ಪರಮೇಶ್ವರ್ (Dr. G. Parameshwara) ಅವರ ಹೆಸರನ್ನು ಮುನ್ನೆಲೆಗೆ ತರಲಾಗುತ್ತಿದೆ.
ಸಿದ್ದರಾಮಯ್ಯ ಬಣವು ಈಗ ಕೇವಲ ‘ದಲಿತ ಸಿಎಂ’ ಕೂಗನ್ನು ಮಾತ್ರವಲ್ಲದೆ, ‘ಸೀನಿಯಾರಿಟಿ’ (Seniority) ಕಾರ್ಡ್ ಅನ್ನು ಅತ್ಯಂತ ಜಾಣ್ಮೆಯಿಂದ ಪ್ಲೇ ಮಾಡುತ್ತಿದೆ. ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅತಿ ಹೆಚ್ಚು ಕಾಲ (8 ವರ್ಷ) ಸೇವೆ ಸಲ್ಲಿಸಿದವರು. ಅವರ ನೇತೃತ್ವದಲ್ಲೇ ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಅವರಿಗೆ ಸಿಎಂ ಆಗುವ ಅವಕಾಶ ಲಭಿಸಿರಲಿಲ್ಲ ಎನ್ನುವುದು ಸಿದ್ದು ಬಣದ ವಾದ.
ಇದುವರೆಗೆ ಯಾವುದೇ ದೊಡ್ಡ ಕಳಂಕವಿಲ್ಲದ ಹಾಗೂ ಆಡಳಿತಾತ್ಮಕ ಅನುಭವ ಹೊಂದಿರುವ ಪರಮೇಶ್ವರ್ ಅವರು ಸಿಎಂ ಆದರೆ ಸಿದ್ದರಾಮಯ್ಯ ಅವರಿಗೂ ಆಕ್ಷೇಪವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಖರ್ಗೆ ಭೇಟಿಯ ರಹಸ್ಯವೇನು?
ಇಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಪರಮೇಶ್ವರ್ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಇದು ಕೇವಲ ಸೌಜನ್ಯಯುತ ಭೇಟಿ, ರಾಜಕೀಯ ಚರ್ಚೆ ನಡೆದಿಲ್ಲ ಎಂದು ಪರಮೇಶ್ವರ್ ಹೇಳಿದ್ದರೂ, ಇತ್ತೀಚೆಗೆ ನಡೆದ ‘ಡಿನ್ನರ್ ಮೀಟಿಂಗ್’ಗಳಲ್ಲಿ ನಡೆದ ಚರ್ಚೆಗಳ ಸಾರಾಂಶವನ್ನು ಹೈಕಮಾಂಡ್‌ಗೆ ಮುಟ್ಟಿಸಿದ್ದಾರೆ ಎನ್ನಲಾಗುತ್ತಿದೆ. ಡಿ.ಕೆ. ಶಿವಕುಮಾರ್ ಬಣಕ್ಕೆ ಟಕ್ಕರ್ ಕೊಡಲು ಈ ‘ಪರಂ ಕಾರ್ಡ್’ ಸಿದ್ದರಾಮಯ್ಯ ಬಣಕ್ಕೆ ವರದಾನವಾಗಬಹುದು ಎಂಬ ಲೆಕ್ಕಾಚಾರವಿದೆ.






