ಮಂಗಳೂರು: ಭಾರತದ ರಸ್ತೆಗಳಲ್ಲಿ ಸಂಚರಿಸುವಾಗ ವಾಹನಗಳ ಹಿಂಭಾಗದಲ್ಲಿ ಬರೆದಿರುವ ವಿಚಿತ್ರ ಮತ್ತು ತಮಾಷೆಯ ಸಾಲುಗಳು ಆಗಾಗ ಗಮನ ಸೆಳೆಯುತ್ತವೆ. ಇದೀಗ ಮಂಗಳೂರಿನಲ್ಲಿ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರಿನ ಹಿಂಭಾಗದಲ್ಲಿದ್ದ ಸ್ಟಿಕ್ಕರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನೆಟ್ಟಿಗರ ಮೊಗದಲ್ಲಿ ನಗು ತರಿಸಿದೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಾರುತಿ ಸುಜುಕಿ ಆಲ್ಟೋ ಕಾರಿನ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು (@bearys_in_dubai) ಹಂಚಿಕೊಂಡಿದ್ದಾರೆ. ಈ ಕಾರಿನ ಹಿಂಭಾಗದ ಬಾನೆಟ್ ಮೇಲೆ “Keep distance, EMI pending” (ಅಂತರ ಕಾಯ್ದುಕೊಳ್ಳಿ, ಇಎಂಐ ಬಾಕಿ ಇದೆ) ಎಂದು ಬರೆಯಲಾಗಿದೆ. ಸಾಮಾನ್ಯವಾಗಿ ವಾಹನಗಳಲ್ಲಿ ‘ಅಂತರ ಕಾಯ್ದುಕೊಳ್ಳಿ’ ಎಂಬ ಸುರಕ್ಷತಾ ಎಚ್ಚರಿಕೆ ಇರುತ್ತದೆ. ಆದರೆ, ಈ ವಾಹನ ಮಾಲೀಕರು ಅದಕ್ಕೆ ತಮ್ಮ ಆರ್ಥಿಕ ಸಂಕಷ್ಟವನ್ನು ಸೇರಿಸಿ ಹಾಸ್ಯಮಯವಾಗಿ ಬರೆಸಿರುವುದು ಎಲ್ಲರ ಗಮನ ಸೆಳೆದಿದೆ.
ಈ ವಿಡಿಯೋ ಅಪ್‌ಲೋಡ್ ಆದ ಕೆಲವೇ ದಿನಗಳಲ್ಲಿ ಬರೋಬ್ಬರಿ 54 ಮಿಲಿಯನ್ (5.4 ಕೋಟಿ) ವೀಕ್ಷಣೆ ಕಂಡಿದ್ದು, 3 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಮಧ್ಯಮ ವರ್ಗದ ಜನರ ಆರ್ಥಿಕ ಪರಿಸ್ಥಿತಿ ಮತ್ತು ಸಾಲದ ಹೊರೆಯನ್ನು ಈ ಸಾಲುಗಳು ಪ್ರತಿಬಿಂಬಿಸುತ್ತವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. “ಇದು ತಮಾಷೆಯಾಗಿದ್ದರೂ, ಅಷ್ಟೇ ಸತ್ಯ,” ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು “ಹುಡುಗರು ಇದನ್ನು ನೋಡಿ ನಗುತ್ತಾರೆ, ಆದರೆ ಗಂಡಸರಿಗೆ ಇದರ ನೋವು ಅರ್ಥವಾಗುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ. “ಇದು ಬೆಸ್ಟ್ ಸ್ಲೋಗನ್” ಎಂದು ಹಲವರು ಶ್ಲಾಘಿಸಿದ್ದಾರೆ.
ತಮಿಳುನಾಡಿನಲ್ಲೂ ನಡೆದಿತ್ತು ಇಂಥದ್ದೇ ಘಟನೆ:
ಈ ಹಿಂದೆ ತಮಿಳುನಾಡಿನಲ್ಲೂ ಇಂತಹದ್ದೇ ವಿಡಿಯೋ ವೈರಲ್ ಆಗಿತ್ತು. ಮಾರುತಿ ಸುಜುಕಿ ಇಗ್ನಿಸ್ ಕಾರಿನ ಮೇಲೆ “My other car is BMW” (ನನ್ನ ಇನ್ನೊಂದು ಕಾರು ಬಿಎಂಡಬ್ಲ್ಯು) ಎಂದು ಬರೆಯಲಾಗಿತ್ತು. ತಮಾಷೆ ಎಂದರೆ, ಆ ಕಾರು ಮನೆಯೊಳಗೆ ಪಾರ್ಕ್ ಮಾಡುವಾಗ ಅಲ್ಲಿ ನಿಜವಾಗಿಯೂ ಬಿಎಂಡಬ್ಲ್ಯು ಕಾರು ನಿಂತಿತ್ತು! ಒಟ್ಟಿನಲ್ಲಿ ಭಾರತೀಯರ ಹಾಸ್ಯಪ್ರಜ್ಞೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.






