ಹೈದರಾಬಾದ್: ಸಿನಿಮಾ ತಾರೆಯರನ್ನು ಹತ್ತಿರದಿಂದ ನೋಡಬೇಕು, ಅವರ ಜೊತೆ ಒಂದು ಸೆಲ್ಫಿ ತಗೆದುಕೊಳ್ಳಬೇಕು ಎಂಬ ಅಭಿಮಾನಿಗಳ ಹುಚ್ಚು ಅತಿಯಾದಾಗ ಅದು ತಾರೆಯರಿಗೆ ಸಂಕಷ್ಟ ತಂದೊಡ್ಡುತ್ತದೆ. ಸೌತ್ ಸುಂದರಿ ಸಮಂತಾ ರುತ್ ಪ್ರಭು (Samantha Ruth Prabhu) ಅವರಿಗೆ ಈಗ ಇಂತಹುದೇ ಅನುಭವವಾಗಿದೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳು ನಟಿಯ ಮೇಲೆ ಮುಗಿಬಿದ್ದ ಘಟನೆ ನಡೆದಿದೆ.
ಹೈದರಾಬಾದ್‌ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸಿದ್ದ ಸಮಂತಾ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದರು. ಅವರು ವೇದಿಕೆಯಿಂದ ಹೊರಬರುತ್ತಿದ್ದಂತೆಯೇ ಸೆಲ್ಫಿಗಾಗಿ ಅಭಿಮಾನಿಗಳು ಒಮ್ಮೆಗೆ ನೂಕುನುಗ್ಗಲು ಶುರುಮಾಡಿದರು.
ಭದ್ರತಾ ಸಿಬ್ಬಂದಿಯನ್ನೂ ಮೀರಿ ಅಭಿಮಾನಿಗಳು ಸಮಂತಾ ಅವರ ಮೈಮೇಲೆ ಬಿದ್ದರು. ಇದರಿಂದ ಕೆಲಕಾಲ ಸಮಂತಾ ಅವರು ಅಲ್ಲಿಂದ ಹೊರಬರಲು ಸಾಧ್ಯವಾಗದೆ ಪರದಾಡಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಬಾಡಿಗಾರ್ಡ್‌ಗಳು ಬಹಳ ಕಷ್ಟಪಟ್ಟು ಸಮಂತಾ ಅವರನ್ನು ಜನಜಂಗುಳಿಯಿಂದ ರಕ್ಷಿಸಿ, ಸುರಕ್ಷಿತವಾಗಿ ಕಾರಿನೊಳಗೆ ಕೂರಿಸುವಲ್ಲಿ ಯಶಸ್ವಿಯಾದರು.
ನಿಧಿ ಅಗರ್ವಾಲ್ ಬೆನ್ನಲ್ಲೇ ಸಮಂತಾಗೆ ಸಂಕಷ್ಟ:
ಇತ್ತೀಚೆಗಷ್ಟೇ ನಟಿ ನಿಧಿ ಅಗರ್ವಾಲ್ (Nidhhi Agerwal) ಅವರ ಮೇಲೂ ಅಭಿಮಾನಿಗಳು ಇದೇ ರೀತಿ ಮುಗಿಬಿದ್ದಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಸಮಂತಾ ಅವರಿಗೆ ಎದುರಾದ ಈ ಪರಿಸ್ಥಿತಿ ಸೆಲ್ಫಿ ಕ್ರೇಜ್ ಯಾವ ಮಟ್ಟಕ್ಕೆ ಹೋಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.






