ಉಡುಪಿ: ದೇಶದ ಭದ್ರತೆಗೆ ಸಂಬಂಧಿಸಿದ ನೌಕಾಪಡೆಯ (Navy) ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡುತ್ತಿದ್ದ ಜಾಲವನ್ನು ಉಡುಪಿಯ ಮಲ್ಪೆ ಪೊಲೀಸರು (Malpe Police) ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳಿಗೆ ನೆರವಾಗುತ್ತಿದ್ದ ಮತ್ತೊಬ್ಬ ಕಿರಾತಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಜರಾತ್‌ನ ಕೈಲಾಸ್ ನಗರಿಯ ಹಿರೇಂದ್ರ (34) ಎಂಬಾತನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಈತ ಹಣದ ಆಸೆಗಾಗಿ ಆರೋಪಿಗಳಿಗೆ ಸಿಮ್ ಕಾರ್ಡ್‌ಗಳನ್ನು (SIM Cards) ಒದಗಿಸಿದ್ದ ಎನ್ನಲಾಗಿದೆ.
ನವೆಂಬರ್ 21ರಂದು ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ (Cochin Shipyard) ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂಬಿಬ್ಬರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಇವರು ಸಹಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಈ ಆರೋಪಿಗಳು ಶಿಪ್ ಯಾರ್ಡ್‌ನಲ್ಲಿ ನಡೆಯುವ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಚಟುವಟಿಕೆಗಳ ಮಾಹಿತಿ ಹಾಗೂ ಫೋಟೋಗಳನ್ನು ಪಾಕಿಸ್ತಾನದ ಗುಪ್ತಚರರಿಗೆ ರವಾನಿಸುತ್ತಿದ್ದರು.
ಕೊಚ್ಚಿನ್ ಶಿಪ್ ಯಾರ್ಡ್‌ನ ಅಧಿಕಾರಿಗಳಿಗೆ ಈ ಸಿಬ್ಬಂದಿಗಳ ನಡವಳಿಕೆಯ ಮೇಲೆ ಸಂಶಯ ಬಂದಿತ್ತು. ತಕ್ಷಣ ಅವರು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಂಧಿತ ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಗುಜರಾತ್‌ನ ಹಿರೇಂದ್ರನ ಹೆಸರು ಬೆಳಕಿಗೆ ಬಂದಿದೆ. ಹಿರೇಂದ್ರ ಹಣ ಪಡೆದು ಸಕ್ರಿಯ ಸಿಮ್ ಕಾರ್ಡ್‌ಗಳನ್ನು ಒದಗಿಸುತ್ತಿದ್ದನು, ಇದನ್ನು ಬಳಸಿಕೊಂಡು ಆರೋಪಿಗಳು ಪಾಕಿಸ್ತಾನದ ಸಂಪರ್ಕದಲ್ಲಿದ್ದರು.






