ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ (ಡಿಸೆಂಬರ್ 24) ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) ದೆಹಲಿ ಮತ್ತು ಆಂಧ್ರಪ್ರದೇಶ ನಡುವಿನ ಪಂದ್ಯಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಜೂನ್ ತಿಂಗಳಲ್ಲಿ ನಡೆದ ಕಾಲ್ತುಳಿತದ ಕಹಿ ನೆನಪಿನ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ (Commissioner Seemant Kumar Singh) ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, PWD, GBA ಮತ್ತು ಪೊಲೀಸ್ ಇಲಾಖೆಯ ಜಂಟಿ ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಜೂನ್ 4 ರಂದು ಆರ್ ಸಿ ಬಿ ವಿಜಯೋತ್ಸವದ ವೇಳೆ ಸಂಭವಿಸಿದ ದುರಂತದ ನಂತರ ಸ್ಟೇಡಿಯಂನ ಸುರಕ್ಷತೆಯ ಬಗ್ಗೆ 17 ಅಂಶಗಳ ಮಾರ್ಗಸೂಚಿಯನ್ನು ನೀಡಲಾಗಿತ್ತು. ಆದರೆ ಅವುಗಳು ಪೂರ್ಣವಾಗಿ ಈಡೇರಿಲ್ಲ ಎನ್ನುವುದು ವರದಿಯಲ್ಲಿ ಉಲ್ಲೇಖವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವುದಿಲ್ಲ ಎಂಬ ಕಾರಣಕ್ಕೆ ಅಂತಿಮ ಕ್ಷಣದಲ್ಲಿ ಪಂದ್ಯವನ್ನು ಅಲೂರು ಅಥವಾ ಬಿಸಿಸಿಐನ ಹೊಸ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮೈದಾನಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ವಿಜಯ್ ಹಜಾರೆ ಟ್ರೋಫಿಗಾಗಿ ದೆಹಲಿ ತಂಡದ ಪರ ಆಡಲು ವಿರಾಟ್ ಕೊಹ್ಲಿ (Virat Kohli) ಮತ್ತು ರಿಷಬ್ ಪಂತ್ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಅಭಿಮಾನಿಗಳು ಇಲ್ಲದೇ ಪಂದ್ಯ ನಡೆಸಲು ತೀರ್ಮಾಣ ಮಾಡಲಾಗಿತ್ತು. ನಂತರ ಕೊನೆಗೆ ಸಮಿತಿ ಒಪ್ಪಿಗೆಗಾಗಿ ಕಾಯುತ್ತಿದ್ದರು. ಇದೀಗ ಪಂದ್ಯ ನಡೆಯುವುದಿಲ್ಲ ಎಂದು ಸಮಿತಿ ನಿರ್ಧರಿಸಿದೆ.






