ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿ ಚಿರತೆ ಹಾವಳಿ ಮತ್ತೆ ಶುರುವಾಗಿದ್ದು, ಬೆಳವಾಡಿ ಗ್ರಾಮದಲ್ಲಿ ಚಿರತೆಯೊಂದು ಬೀದಿನಾಯಿಯನ್ನು ಕಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಈ ದೃಶ್ಯ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬೆಳವಾಡಿ ಕೆರೆಯ ಸಮೀಪವಿರುವ ಪಾಪಣ್ಣ ಎಂಬುವವರ ಮನೆ ಬಳಿ ಈ ಘಟನೆ ನಡೆದಿದೆ. ಏಕಾಏಕಿ ಪ್ರತ್ಯಕ್ಷವಾದ ಚಿರತೆ, ಅಲ್ಲಿದ್ದ ಬೀದಿನಾಯಿಯ ಮೇಲೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಸ್ಥಳದಲ್ಲಿದ್ದ ನಾಲ್ಕೈದು ನಾಯಿಗಳು ಒಟ್ಟಾಗಿ ಬೊಗಳುತ್ತಾ ಚಿರತೆಗೆ ಬೆದರಿಸಲು ಮುಂದಾಗಿವೆ. ಆದರೆ, ನಾಯಿಗಳ ಆರ್ಭಟಕ್ಕೆ ಸ್ವಲ್ಪವೂ ಜಗ್ಗದ ಚಿರತೆ, ಒಂದು ನಾಯಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಕ್ಷಣಾರ್ಧದಲ್ಲಿ ಕತ್ತಲಲ್ಲಿ ಕಣ್ಮರೆಯಾಗಿದೆ.

ಜನವಸತಿ ಪ್ರದೇಶಕ್ಕೆ ಚಿರತೆ ನುಗ್ಗಿ ನಾಯಿಯನ್ನು ಹೊತ್ತೊಯ್ದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ರಾತ್ರಿ ವೇಳೆ ಮನೆಯಿಂದ ಹೊರಬರದಂತೆ ಮತ್ತು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಚಿರತೆ ಸಂಚಾರ ಹೀಗೆಯೇ ಮುಂದುವರಿದರೆ ಬೋನ್ ಇಟ್ಟು ಸೆರೆಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.






