ಕಾರವಾರ: ಅಕ್ರಮ ಆಸ್ತಿ ಮತ್ತು ಹಣ ಗಳಿಕೆಯ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಮತ್ತು ಹಳಿಯಾಳದಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸಹಕಾರಿ ಸಂಘವೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೋಲ್ ಸಿರ್ಸಿ ಗ್ರೂಪ್ ಗ್ರಾಮ ಸೇವಾ ಸಹಕಾರಿ ಸಂಘ ನಿಯಮಿತದ ಸಿಇಒ ಮಾರುತಿ ಯಶವಂತ್ ಮಾಲ್ವಿ (Maruti Yashwant Malvi) ಅವರ ಸಿದ್ಧಾಪುರದಲ್ಲಿರುವ ಕಚೇರಿ, ಹಳಿಯಾಳದಲ್ಲಿರುವ ನಿವಾಸ ಹಾಗೂ ಅವರ ಮಾಲೀಕತ್ವದ ಬಟ್ಟೆ ಅಂಗಡಿ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಕಾರವಾರ ಲೋಕಾಯುಕ್ತ ಡಿವೈಎಸ್‌ಪಿ ಧನ್ಯಾ ನಾಯಕ್ (DYSP Dhanya Nayak) ನೇತೃತ್ವದಲ್ಲಿ ಹಳಿಯಾಳದಲ್ಲಿ ದಾಳಿ ನಡೆದರೆ, ಸಿದ್ಧಾಪುರದಲ್ಲಿ ಲೋಕಾಯುಕ್ತ ಪಿಐ ವಿನಾಯಕ ಬಿಲ್ಲವ (PI Vinayak Billava)) ಅವರ ತಂಡ ಪರಿಶೀಲನೆ ನಡೆಸುತ್ತಿದೆ.ಈ ಬೃಹತ್ ದಾಳಿಯಲ್ಲಿ ಉಡುಪಿ, ಮಂಗಳೂರು ಮತ್ತು ಕಾರವಾರದ ಲೋಕಾಯುಕ್ತ ಅಧಿಕಾರಿಗಳು ಪಾಲ್ಗೊಂಡಿದ್ದು, ಅಕ್ರಮ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
ಮಾರುತಿ ಯಶವಂತ್ ಮಾಲ್ವಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಮತ್ತು ಹಣವನ್ನು ಸಂಗ್ರಹಿಸಿದ್ದಾರೆ ಎಂಬ ದೂರಿನ ಮೇರೆಗೆ ಈ ದಾಳಿ ನಡೆದಿದೆ. ಸದ್ಯ ಕಚೇರಿ ಮತ್ತು ಮನೆಯಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.






