ಬಳ್ಳಾರಿ: ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ (Ballari Central Jail) ಕೈದಿಗಳು ಅಕ್ರಮವಾಗಿ ಮೊಬೈಲ್ ಬಳಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಜೈಲು ಅಧಿಕಾರಿಗಳು ನಡೆಸಿದ ಮಧ್ಯರಾತ್ರಿಯ ಕಾರ್ಯಾಚರಣೆಯಲ್ಲಿ ಬರೋಬ್ಬರಿ 10 ಕೀಪ್ಯಾಡ್ ಮೊಬೈಲ್‌ಗಳು ಪತ್ತೆಯಾಗಿವೆ. ಜೈಲಿನ ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಮೊಬೈಲ್ ಮತ್ತು ಚಾರ್ಜರ್‌ಗಳು ಒಳಗೆ ಬಂದಿರುವುದು ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಜೈಲಿನ ಅಧಿಕಾರಿಗಳು ನಿಷೇಧಿತ ವಸ್ತುಗಳ ಪತ್ತೆಗಾಗಿ ಹಠಾತ್ ದಾಳಿ (Raid) ನಡೆಸಿದಾಗ, ಕೈದಿಗಳು ಮೊಬೈಲ್‌ಗಳನ್ನು ಅಡಗಿಸಿಟ್ಟಿದ್ದ ವಿಚಿತ್ರ ಜಾಗಗಳು ಕಂಡುಬಂದಿವೆ. ಜೈಲಿನ ಮೂರನೇ ಬ್ಯಾರಕ್‌ನ ನೆಲದಡಿ ಗುಂಡಿ ತೋಡಿ 3 ಮೊಬೈಲ್‌ಗಳನ್ನು ಬಚ್ಚಿಡಲಾಗಿತ್ತು. ಸಾಮಾನ್ಯ ಶೌಚಾಲಯದ ಮುಂಭಾಗದ ಗಿಡಗಳ ಮರೆಯಲ್ಲಿ ಉಳಿದ ಮೊಬೈಲ್‌ಗಳು ಸಿಕ್ಕಿವೆ. ಒಟ್ಟು 10 ಕೀಪ್ಯಾಡ್ ಮೊಬೈಲ್‌ಗಳು(10 keypad phones) , 3 ಚಾರ್ಜರ್‌ಗಳು (3 chargers) ಮತ್ತು ಕೇಬಲ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಯಾವ ಕೈದಿಗಳು ಈ ಮೊಬೈಲ್‌ಗಳನ್ನು ಬಳಸುತ್ತಿದ್ದರು ಮತ್ತು ಇಷ್ಟು ಭದ್ರತೆಯ ನಡುವೆ ಜೈಲಿನ ಒಳಗೆ ಇವು ಹೇಗೆ ಬಂದವು ಎಂಬ ಬಗ್ಗೆ ತನಿಖೆ ಆರಂಭವಾಗಿದೆ. ಹೊರಗಿನವರ ಅಥವಾ ಜೈಲಿನ ಸಿಬ್ಬಂದಿಯ ನೆರವಿಲ್ಲದೆ ಇದು ಸಾಧ್ಯವಿಲ್ಲ ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ (Brucepet Police Station) ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ.






