ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಸೇರಿದಂತೆ ನಾಲ್ವರ ವಿರುದ್ಧದ ತನಿಖೆಯ ‘ಕೇಸ್ ಫೈಲ್’ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ.
ಮೈಸೂರು ಲೋಕಾಯುಕ್ತ ಪೊಲೀಸರು ಈಗಾಗಲೇ ಸಿಎಂ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ‘ಬಿ-ರಿಪೋರ್ಟ್’ (ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂಬ ವರದಿ) ಸಲ್ಲಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಈ ಬಿ-ರಿಪೋರ್ಟ್ ಅನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಬಿ-ರಿಪೋರ್ಟ್ (B-report) ಮಾತ್ರವಲ್ಲದೆ ಪ್ರಕರಣದ ಸಂಪೂರ್ಣ ತನಿಖಾ ವರದಿ (Full Case File) ಸಲ್ಲಿಸುವಂತೆ ಲೋಕಾಯುಕ್ತಕ್ಕೆ ಈ ಹಿಂದೆ ಸೂಚಿಸಿತ್ತು.
ಇಂದು ಏನಾಗಬಹುದು?
ಇಂದು ಲೋಕಾಯುಕ್ತ ಎಸ್‌ಪಿ ಉದೇಶ್ ಅವರು ನ್ಯಾಯಾಲಯಕ್ಕೆ ಕೇಸ್ ಫೈಲ್ ಸಲ್ಲಿಕೆ ಮಾಡಲಿದ್ದಾರೆ. ಈ ವರದಿಯನ್ನು ಪರಿಶೀಲಿಸಿದ ನಂತರ, ಲೋಕಾಯುಕ್ತ ನೀಡಿದ ಬಿ-ರಿಪೋರ್ಟ್ ಅನ್ನು ನ್ಯಾಯಾಲಯ ಅಂಗೀಕರಿಸುತ್ತದೆಯೇ ಅಥವಾ ಹೆಚ್ಚಿನ ತನಿಖೆಗೆ ಆದೇಶಿಸುತ್ತದೆಯೇ ಎಂಬ ಕುತೂಹಲ ಮೂಡಿದೆ.
ಒಂದು ವೇಳೆ ನ್ಯಾಯಾಲಯ ಬಿ-ರಿಪೋರ್ಟ್ ಅನ್ನು ಎತ್ತಿ ಹಿಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ಮಟ್ಟದ ರಾಜಕೀಯ ರಿಲೀಫ್ ಸಿಗಲಿದೆ.






