ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ (Biklu Shiva) ಕೊ*ಲೆ ಪ್ರಕರಣದ ಒಳಸಂಚಿನ ಆರೋಪ ಎದುರಿಸುತ್ತಿರುವ ಶಾಸಕ ಬೈರತಿ ಬಸವರಾಜು (Byrathi Basavaraj) ಅವರಿಗಾಗಿ ಸಿಐಡಿ (CID) ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಬಂಧನದ ಭೀತಿಯಲ್ಲಿರುವ ಶಾಸಕರು ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಹೊರರಾಜ್ಯಗಳಲ್ಲಿ ಬಲೆ ಬೀಸಿದ್ದಾರೆ.
ಮೂರು ರಾಜ್ಯಗಳಲ್ಲಿ ಸಿಐಡಿ ಹಂಟಿಂಗ್
ಬಿಕ್ಲು ಶಿವ ಕೊಲೆಗೆ ಸಂಚು ರೂಪಿಸಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳ ತಂಡ ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರ (Maharashtra) ಮತ್ತು ಗೋವಾ (Goa) ಭಾಗಗಳಲ್ಲಿ ಶೋಧ ನಡೆಸುತ್ತಿದೆ. ಕರ್ನಾಟಕದ ಒಳಗೂ ಹಲವು ಕಡೆ ದಾಳಿ ಮಾಡಲಾಗಿದ್ದರೂ, ಶಾಸಕ ಬೈರತಿ ಬಸವರಾಜು ಅವರ ಯಾವುದೇ ಸುಳಿವು ಇದುವರೆಗೆ ಸಿಕ್ಕಿಲ್ಲ.
ಇಂದು ಜಾಮೀನು ಅರ್ಜಿ ವಿಚಾರಣೆ
ತಮ್ಮ ಬಂಧನವನ್ನು ತಡೆಯಲು ಬೈರತಿ ಬಸವರಾಜು ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿಯ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ವಿಚಾರಣೆ ಆರಂಭವಾಗಲಿದ್ದು, ಬೈರತಿ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸಿಐಡಿ ಬಲವಾದ ಆಕ್ಷೇಪಣೆ ಸಲ್ಲಿಸಲಿದೆ.
ಕೊಲೆಯ ಹಿಂದಿರುವ ಒಳಸಂಚಿನ ಬಗ್ಗೆ (Conspiracy) ಈಗಾಗಲೇ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿರುವ ಸಿಐಡಿ, ತನಿಖೆಗೆ ಶಾಸಕರ ಬಂಧನ ಅನಿವಾರ್ಯ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಮುಂದಾಗಿದೆ.
ನ್ಯಾಯಾಲಯ ಇಂದು ಜಾಮೀನು ನೀಡುತ್ತದೆಯೇ ಅಥವಾ ಸಿಐಡಿ ವಾದವನ್ನು ಪುರಸ್ಕರಿಸುತ್ತದೆಯೇ ಎಂಬುದು ಬೈರತಿ ಅವರ ರಾಜಕೀಯ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ.






