ಬೆಂಗಳೂರು: ಕಿಚ್ಚ ಸುದೀಪ್ (Kichcha Sudeep) ತಮ್ಮ ಮುಂಬರುವ ‘ಮಾರ್ಕ್’ (Mark) ಸಿನಿಮಾ ಪ್ರಚಾರದ ವೇಳೆ ಹುಬ್ಬಳ್ಳಿಯಲ್ಲಿ ನೀಡಿದ್ದ ಹೇಳಿಕೆ ತಪ್ಪು ದಾರಿಗೆ ಹೋಗುತ್ತಿರುವುದನ್ನು ಗಮನಿಸಿದ ಅವರು, ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. ಯಾರ ಹೆಸರನ್ನೂ ಎತ್ತದೆ ವಿಜಯಲಕ್ಷ್ಮಿ ದರ್ಶನ್ ಅವರ ಹೇಳಿಕೆಗೆ ಉತ್ತರಿಸಿದ್ದಾರೆ.
ತಮ್ಮ ಭಾಷಣದಲ್ಲಿ ‘ಯುದ್ಧ’ ಎಂಬ ಪದ ಬಳಸಿದ್ದು ಪೈರಸಿ (Piracy) ಮಾಡುವವರ ವಿರುದ್ಧವೇ ಹೊರತು ಮತ್ಯಾರದ್ದೋ ಜಿದ್ದಾಜಿದ್ದಿಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯಾರಿಗಾದರೂ ವಾರ್ನಿಂಗ್ ಕೊಡಬೇಕಿದ್ದರೆ ನನಗೆ ವೇದಿಕೆ ಬೇಕಾಗಿಲ್ಲ. ಚೆಸ್ ಆಟದಲ್ಲಿ ‘ಚೆಕ್’ ಅಂತ ಹೇಳಿಯೇ ಹೊಡೆಯಬೇಕು. ನಾನು ಪೈರಸಿ ಮಾಡೋರಿಗೆ ಚೆಕ್ ಹೇಳಿದ್ದೇನೆ. ನನ್ನ ಜೊತೆ ಈಗ ಸ್ಟ್ರಾಂಗ್ ಲೀಗಲ್ ಟೀಮ್ ಇದೆ. ಪೈರಸಿ ಮಾಡೋರನ್ನು ಹಿಡಿದು ಜೈಲಿಗೆ ಹಾಕಿಸುವುದು ಗ್ಯಾರಂಟಿ. ಇದು ಕೇವಲ ಸಿನಿಮಾ ಅಲ್ಲ, ನೂರಾರು ಜನರ ಶ್ರಮ ಎಂದಿದ್ದಾರೆ.
ದಾವಣಗೆರೆಯಲ್ಲಿ ವಿಜಯಲಕ್ಷ್ಮಿ(Vijayalakshmi) ಅವರು ನೀಡಿದ ‘ಮಾಯವಾಗುತ್ತಾರೆ’ ಎಂಬ ಹೇಳಿಕೆಗೆ ಸುದೀಪ್ ಶಾಂತವಾಗಿಯೇ ಮಾತನಾಡಿದ ಅವರು, ವಿಜಯಲಕ್ಷ್ಮಿ ಅವರಿಗೆ ಏನು ನೋವಿದೆಯೋ ಗೊತ್ತಿಲ್ಲ. ಎಲ್ಲೋ ಪ್ರಾರ್ಥನೆ ಮಾಡಿ ಗಂಟೆ ಬಾರಿಸಿದರೆ ನಾನು ಯಾಕೆ ಉತ್ತರಿಸಲಿ? ನನಗೇ ಹೇಳಿದ್ದು ಅಂತ ಅವರು ನೇರವಾಗಿ ಹೇಳಲಿ, ಆಗ ನಾನು ಉತ್ತರ ಕೊಡುತ್ತೇನೆ ಎಂದರು.
ನಾನು ಮಾತನಾಡಿದ ಮರುದಿನವೇ ಬೆಂಕಿ ಹತ್ತಬೇಕಿತ್ತು, ಆದರೆ ಆ ಕಡೆಯಿಂದ ಬಂದ ಒಂದು ಪ್ರತಿಕ್ರಿಯೆಯಿಂದ ವಿಷಯ ದೊಡ್ಡದಾಗುತ್ತಿದೆ. ಇಂಡಸ್ಟ್ರಿಯಲ್ಲಿ ಶಿವಣ್ಣ, ಯಶ್, ಸರ್ಜಾ ಹೀಗೆ ಬಹಳಷ್ಟು ನಟರಿದ್ದಾರೆ. ಅವರ್ಯಾರೂ ಇದು ತಮಗೆ ಹೇಳಿದ್ದು ಅಂದುಕೊಳ್ಳಲಿಲ್ಲ. ನಾನೇಕೆ ಈ ವಿವಾದದ ಕೇಂದ್ರಬಿಂದುವಾಗುತ್ತಿದ್ದೇನೆ ಎಂದು ಗೊತ್ತಿಲ್ಲ ಎಂದು ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಶಿವಣ್ಣ ಕನ್ನಡದ ಆಸ್ತಿ, ಅವರ ಪರವಾಗಿ ನಾನು ಯಾವಾಗಲೂ ಇರುತ್ತೇನೆ ಎಂದು ಶಿವಣ್ಣನ ಮೇಲಿರುವ ಪ್ರೀತಿಯನ್ನು ಪುನರುಚ್ಚರಿಸಿದ್ದಾರೆ.






