ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ (Tarikere) ಸಮೀಪ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನಡುವೆ, ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನೇರ ಪ್ರಶ್ನೆ ಮಾಡಿದ್ದಾರೆ.
ಹೆದ್ದಾರಿ ನಿರ್ಮಾಣದ ಹೆಸರಿನಲ್ಲಿ ರಸ್ತೆಗಳನ್ನು ಅಗೆದು ಹಾಕಲಾಗಿದ್ದು, ಪರ್ಯಾಯ ರಸ್ತೆಗಳು ಅಥವಾ ಇರುವ ರಸ್ತೆಗಳು ಗುಂಡಿಮಯವಾಗಿವೆ (Potholes). ರಸ್ತೆ ಎಷ್ಟು ಹೀನಾಯ ಸ್ಥಿತಿಯಲ್ಲಿದೆಯೆಂದರೆ, ಸಾವು-ಬದುಕಿನ ನಡುವೆ ಹೋರಾಡುವ ರೋಗಿಗಳನ್ನು ಕರೆದೊಯ್ಯುವ ಆಂಬ್ಯುಲೆನ್ಸ್‌ಗಳು (Ambulance) ಕೂಡ ಇಲ್ಲಿ ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯರು ಈ ರಸ್ತೆಯಲ್ಲಿ ಜೀವ ಕೈಯಲ್ಲಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರುದಾರರು ಅಳಲು ತೋಡಿಕೊಂಡಿದ್ದಾರೆ.

ಟ್ವಿಟರ್ (X) ನಲ್ಲಿ ಹದಗೆಟ್ಟ ರಸ್ತೆಯ ವಿಡಿಯೋ ಹಂಚಿಕೊಂಡಿರುವ ನಾಗರಿಕರು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari), ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ (B.Y. Raghavendra) ಹಾಗೂ ಸ್ಥಳೀಯ ಬಿಜೆಪಿ ಮುಖಂಡರನ್ನು ಟ್ಯಾಗ್ ಮಾಡಿದ್ದಾರೆ. ಅಲ್ಲದೆ, ಹಿರಿಯ ಪತ್ರಕರ್ತರಾದ ಡಿ.ಪಿ. ಸತೀಶ್ ಅವರ ಗಮನ ಸೆಳೆದು, ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸುವಂತೆ ಮನವಿ ಮಾಡಿದ್ದಾರೆ. ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಿ ರಸ್ತೆ ದುರಸ್ತಿ ಮಾಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನೂ ಸ್ಥಳೀಯರು ನೀಡಿದ್ದಾರೆ.






