ಕಾರವಾರ(ಉತ್ತರಕನ್ನಡ): ಜಿಲ್ಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಸಹಕಾರಿ ಸಂಘವೊಂದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ (CEO) ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಸಿದ್ಧಾಪುರ ತಾಲೂಕಿನ ಕೋಲಸಿರ್ಸಿ ಗ್ರೂಪ್ ಗ್ರಾಮ ಸೇವಾ ಸಹಕಾರಿ ಸಂಘದ ಸಿಇಒ ಮಾರುತಿ ಯಶವಂತ್ ಮಾಲ್ವಿ ಅವರೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಂಗಳವಾರ ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಮೂರು ಕಡೆ ಏಕಕಾಲಕ್ಕೆ ರೇಡ್:
ಮಾರುತಿ ಯಶವಂತ್ ಮಾಲ್ವಿ ಅವರಿಗೆ ಸೇರಿದ ಸಿದ್ಧಾಪುರದಲ್ಲಿರುವ ಕಚೇರಿ ಹಾಗೂ ಹಳಿಯಾಳದಲ್ಲಿರುವ ಅವರ ವಾಸದ ಮನೆ ಮತ್ತು ಬಟ್ಟೆ ಅಂಗಡಿಯ ಮೇಲೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಮೂರು ಜಿಲ್ಲೆಗಳ ಅಧಿಕಾರಿಗಳಿಂದ ಕಾರ್ಯಾಚರಣೆ:
ಕಾರವಾರ ಲೋಕಾಯುಕ್ತ ಡಿವೈಎಸ್‌ಪಿ ಧನ್ಯಾ ನಾಯಕ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಹಳಿಯಾಳದಲ್ಲಿರುವ ಸಿಇಒ ನಿವಾಸ ಮತ್ತು ಅಂಗಡಿಯ ತಪಾಸಣೆಯನ್ನು ಡಿವೈಎಸ್‌ಪಿ ಧನ್ಯಾ ನಾಯಕ ಅವರ ತಂಡ ನಡೆಸುತ್ತಿದ್ದರೆ, ಸಿದ್ಧಾಪುರದಲ್ಲಿರುವ ಕಚೇರಿಯ ಮೇಲೆ ಲೋಕಾಯುಕ್ತ ಪಿಐ ವಿನಾಯಕ್ ಬಿಲ್ಲವ ಅವರ ತಂಡ ದಾಳಿ ನಡೆಸಿದೆ.

ಈ ಕಾರ್ಯಾಚರಣೆಯಲ್ಲಿ ಕಾರವಾರ, ಉಡುಪಿ ಮತ್ತು ಮಂಗಳೂರು ಲೋಕಾಯುಕ್ತ ವಿಭಾಗದ ಅಧಿಕಾರಿಗಳು ಜಂಟಿಯಾಗಿ ಭಾಗವಹಿಸಿದ್ದಾರೆ. ಸದ್ಯ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.






