Home State Politics National More
STATE NEWS

Bengaluru Press Club ವಾರ್ಷಿಕ ಪ್ರಶಸ್ತಿ ಪ್ರಕಟ: ಸುಭಾಷ್ ಚಂದ್ರ ಎನ್.ಎಸ್ ಸೇರಿದಂತೆ 55 ಪತ್ರಕರ್ತರಿಗೆ ಗೌರವ

Img 9403
Posted By: Devaraj Naik
Updated on: Dec 24, 2025 | 3:23 PM

ಬೆಂಗಳೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಬೆಂಗಳೂರು ಪ್ರೆಸ್‌ಕ್ಲಬ್ ನೀಡುವ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿವೆ. ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ನ ಹಿರಿಯ ವರದಿಗಾರ ಸುಭಾಷ್ ಚಂದ್ರ ಎನ್.ಎಸ್ ಸೇರಿದಂತೆ ಒಟ್ಟು 55 ಸಾಧಕ ಪತ್ರಕರ್ತರು ಈ ಗೌರವಕ್ಕೆ ಭಾಜನರಾಗಿದ್ದಾರೆ.

ಪ್ರಶಸ್ತಿ ಪುರಸ್ಕೃತರ ವಿವರ: ಹಿರಿಯ ಪತ್ರಕರ್ತರಾದ ಮೃತ್ಯುಂಜಯ ಎನ್.ಎಚ್., ನಂಜುಂಡೇಗೌಡ ಎಚ್.ಜೆ., ನಂಜುಂಡಪ್ಪ ವಿ., ಶಿವರುದ್ರಪ್ಪ ಡಿ.ಎಸ್, ಕೀರ್ತಿ ಪ್ರಸಾದ್ ಎಂ., ರಮೇಶ್ ಕುಮಾರ್ ನಾಯ್ಕ್, ಶ್ರೀನಿವಾಸಮೂರ್ತಿ, ಝಿಕ್ರಿಯಾ ಕೆ.ಎಂ., ಅಂತೋನಿ ಎ.ಮೇರಿ, ಅತ್ತಿಗುಪ್ಪೆ ರವಿಕುಮಾರ್, ಮಧುಕೇಶ್ವರ್ ಜವಳಿ, ಅನುಷಾ ರವಿ ಹಾಗೂ ಬನ್ಸಿ ಕಾಳಪ್ಪ ಸೇರಿದಂತೆ ಹಲವು ಗಣ್ಯ ಪತ್ರಕರ್ತರು ಆಯ್ಕೆಯಾಗಿದ್ದಾರೆ.

ಡಿಸೆಂಬರ್ 31ರಂದು ಪ್ರಶಸ್ತಿ ಪ್ರದಾನ: ಡಿ.31 ರಂದು ಬೆಂಗಳೂರಿನ ಪ್ರೆಸ್‌ಕ್ಲಬ್ ಆವರಣದಲ್ಲಿ ನಡೆಯಲಿರುವ ವೈಭವದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಸಂಪುಟದ ಸದಸ್ಯರು ಹಾಗೂ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಬೆಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಭಾಷ್ ಚಂದ್ರ ಅವರ ಬಗ್ಗೆ: ಕಳೆದ 25 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸುಭಾಶಚಂದ್ರ ಎನ್.ಎಸ್, ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಪದವಿಯವರೆಗೂ ಕನ್ನಡದಲ್ಲೇ ಶಿಕ್ಷಣ ಪಡೆದಿದ್ದರು. 2000ರಲ್ಲಿ ಕನ್ನಡ ವಿದ್ಯುನ್ಮಾನ ಕ್ಷೇತ್ರದ ಮೂಲಕ ಮಾಧ್ಯಮ ರಂಗಕ್ಕೆ ಪಾದಾರ್ಪಣೆ ಮಾಡಿದರು.

ಈಟಿವಿ ಕನ್ನಡದಲ್ಲಿ ಹೈದರಾಬಾದ್‌ನಲ್ಲಿ ನಿರೂಪಕರಾಗಿ ಆಯ್ಕೆಯಾಗಿದ್ದ ಅವರು, ಕಾರ್ಯನಿರ್ವಹಿಸಿದ್ದು ವರದಿಗಾರರಾಗಿ. ನಂತರದಲ್ಲಿ 2003ರಲ್ಲಿ ಪ್ರಥಮ ಬಾರಿಗೆ ವಿಜಯ ಟೈಮ್ಸ್‌ನಲ್ಲಿ ಬೆಂಗಳೂರಿನಲ್ಲಿ ವರದಿಗಾರರಾಗಿ ಸೇರ್ಪಡೆಗೊಂಡು, ಅರಣ್ಯ, ಪರಿಸರ, ವಿದ್ಯುತ್, ಲೋಕಾಯುಕ್ತಕ್ಕೆ ಸಂಬಂಧಿಸಿದ ಸಾಕಷ್ಟು ವರದಿಗಳನ್ನು ಬರೆದರು.

ಅಲ್ಲಿಂದ 2007ರಲ್ಲಿ ಹುಬ್ಬಳ್ಳಿಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌‌ಗೆ ಒಂದು ವರ್ಷಗಳ ಕಾಲ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, ನಂತರದಲ್ಲಿ ಹೈಕೋರ್ಟ್, ಪರಿಸರ, ವೈಜ್ಞಾನಿಕ ಮತ್ತು ರಾಜಕೀಯ ವರದಿಗಾರಿಕೆಗಾಗಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಬೆಂಗಳೂರು ವರದಿಗಾರರಾಗಿ ನೇಮಕಗೊಂಡರು. ಅಲ್ಲಿ ಸುಭಾಶಚಂದ್ರ ಲೇಖನಿಯಲ್ಲಿ ಮೂಡಿದ ಅನೇಕ ವರದಿಗಳು ಸುಮೊಟೊ ಪ್ರಕರಣಗಳಾಗಿ ದಾಖಲಾದವು.

ಮಾನವೀಯ ವರದಿಯೊಂದಕ್ಕೆ ಸಂಬಂಧಿಸಿ ಅಂದಿನ ಹೈಕೋರ್ಟ್ ನ್ಯಾಯಾಧೀಶ ಗೋಪಾಲ ಗೌಡರವರು ವೈಯಕ್ತಿಕವಾಗಿ ಸುಭಾಶಚಂದ್ರ ಅವರನ್ನು ಅಭಿನಂದಿಸಿ, ಆ ಪ್ರಕರಣದಲ್ಲಿ ನ್ಯಾಯ ಒದಗಿಸಿಕೊಡಲು ಮುಂದಾದರು.

ಆನೆಗಳ ಸಾವಿನ ಕುರಿತಂತೆ ಪ್ರಕಟವಾಗಿದ್ದ ಅವರ ಸರಣಿ ವರದಿಗೆ ಸಂಬಂಧಿಸಿ ಈಗಲೂ ಸುಮೊಟೊ ಪಿಐಎಲ್ ಹೈಕೋರ್ಟ್‌ನಲ್ಲಿ ಚಾಲ್ತಿಯಲ್ಲಿದೆ. ಇನ್ನು ಅಲ್ಲಿಂದ 2015ರಲ್ಲಿ ಸುದ್ದಿ ಟಿವಿಗೆ ಇನ್‌ಪುಟ್ ಎಡಿಟರ್ ಆಗಿ, 2017ರಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್‌ಗೆ ಬಳ್ಳಾರಿಯ ಜಿಲ್ಲಾ ಮತ್ತು ಪ್ರಧಾನ ವರದಿಗಾರರಾಗಿ ನೇಮಕಗೊಂಡು, ನಂತರ ಅಲ್ಲಿಂದ 2020ರಲ್ಲಿ ಕಾರವಾರಕ್ಕೆ, ಪ್ರಸ್ತುತ ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಮುಖವಾಗಿ ಬಳ್ಳಾರಿ ಜಿಲ್ಲೆಯ ಉಜಿನಿ ಪೀಠದಿಂದ ‘ಸಧರ್ಮ ಪ್ರಸಾರ ರತ್ನ’ ಪ್ರಶಸ್ತಿಯನ್ನು ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಪಡೆದಿರುವ ಸುಭಾಶಚಂದ್ರ ಅವರಿಗೆ 2019ರಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಕೂಡ ದೊರೆತಿದೆ. ಇದರೊಂದಿಗೆ ಅನೇಕ ಗೌರವ- ಸಮ್ಮಾನಗಳಿಗೂ ಅವರು ಭಾಜನರಾಗಿದ್ದಾರೆ.

Shorts Shorts